ದೆಹಲಿ ಶಾಕ್: 13-15 ವರ್ಷ ಹುಡುಗರಿಂದ 6 ವರ್ಷ ಬಾಲಕಿಗೆ ಅತ್ಯಾಚಾರ
ದೆಹಲಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕೇವಲ 6 ವರ್ಷದ ಪುಟ್ಟ ಮಗುವಿನ ಮೇಲೆ ಅತ್ಯಾಚಾರ ನಡೆಸಲಾಗಿದೆ. ಹಾಗಂತ ಈ ಕೃತ್ಯ ಎಸಗಿದವರು ಯಾರೋ ಕಾಮುಕ ಯುವಕರೂ ಅಲ್ಲ, ಕುಡಿತದ ಅಮಲಿನಲ್ಲಿದ್ದವರೂ ಅಲ್ಲ. ಈ ಅತ್ಯಾಚಾರ ನಡೆಸಿದವರು ಮೂವರು ಅಪ್ರಾಪ್ತ ಬಾಲಕರು ಎಂಬುದು ಆಘಾತಕಾರಿ ಸಂಗತಿ. 13, 14 ಮತ್ತು 15 ವರ್ಷದ ಮೂವರು ಮಕ್ಕಳು 6 ವರ್ಷದ ಮಗುವಿನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದು ತೀವ್ರ ಆಘಾತಕ್ಕೆ ಕಾರಣವಾಗಿದೆ.
ಯಾವುದೇ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಾಗ ಕೆಲವರು ಆ ಹೆಣ್ಣಿನ ಬಗ್ಗೆಯೇ ಅಪಸ್ವರ ಎತ್ತುತ್ತಾರೆ. ರಾತ್ರಿ ಹೊತ್ತಿನಲ್ಲಿ ಹೊರಗೆ ಹೋಗಿದ್ದೇಕೆ? ಮೈ ಕಾಣುವ ಬಟ್ಟೆ ಹಾಕಿಕೊಂಡಿದ್ದೇಕೆ? ಆಕೆಯೇ ಪ್ರಚೋದನೆ ಕೊಟ್ಟಿರಬಹುದು ಎಂಬಿತ್ಯಾದಿ ಟೀಕೆಗಳನ್ನು ಮಾಡುವವರು ಇದ್ದೇ ಇರುತ್ತಾರೆ. ಆದರೆ, ಅತ್ಯಾಚಾರ ಮಾಡುವುದಕ್ಕೆ ಯಾವುದೇ ಪ್ರಚೋದನೆಯೂ ಬೇಕಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಏಕೆಂದರೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 6 ವರ್ಷದ ಹೆಣ್ಣುಮಗುವಿನ ಮೇಲೆ ಸಾಮೂಹಿಕ ಅತ್ಯಾಚಾರ (Physical Harassment) ನಡೆದಿದೆ.
ದೆಹಲಿಯ ಭಜನ್ಪುರದಲ್ಲಿ 6 ವರ್ಷದ ಬಾಲಕಿಯ ಮೇಲೆ 15 ವರ್ಷದೊಳಗಿನ ಮೂವರು ಹುಡುಗರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 13, 14 ಮತ್ತು 15 ವರ್ಷ ವಯಸ್ಸಿನ 3 ಆರೋಪಿಗಳನ್ನು ಬಂಧಿಸಲಾಗಿದೆ. ಜನವರಿ 18ರಂದು ಆ ಬಾಲಕಿಯ ಕುಟುಂಬಸ್ಥರು ತಮ್ಮ ಮಗುವಿನ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ನೀಡಿದ್ದರು. ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಅತ್ಯಾಚಾರ ನಡೆಸಿದ ಎಲ್ಲಾ ಆರೋಪಿಗಳು ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.
“ನನ್ನ ಮಗಳ ಸ್ಥಿತಿಯನ್ನು ನೋಡಿದ ನಂತರ ಆರೋಪಿಗಳಲ್ಲಿ ಒಬ್ಬನ ತಾಯಿ ತನ್ನ ಮಗನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾರಣರಾದ ಎಲ್ಲರಿಗೂ ಕಠಿಣ ಶಿಕ್ಷೆ ವಿಧಿಸಬೇಕೆಂದು ನಾನು ಬಯಸುತ್ತೇನೆ” ಎಂದು ಆ ಮಗುವಿನ ತಂದೆ ಹೇಳಿದ್ದಾರೆ. ಭಜನ್ಪುರ ನಿವಾಸಿಗಳು ಈ ಪ್ರಕರಣದಲ್ಲಿ ತ್ವರಿತ ತನಿಖೆ ನಡೆಸಬೇಕೆಂದು ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
ಬಾಲಾಪರಾಧಿಗಳನ್ನು ಬಂಧಿಸಿ ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ. 6 ವರ್ಷದ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ. ಆಕೆಗೆ ಕೌನ್ಸೆಲಿಂಗ್ ಕೂಡ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ ಮಗು ಮನೆಗೆ ಬಂದಾಗ ಆಕೆಯ ಮೈಯೆಲ್ಲ ರಕ್ತವಾಗಿತ್ತು. ನಾನು ಅವಳನ್ನು ಕೇಳಿದಾಗ ಅವಳು ಮೊದಲು ಬಿದ್ದೆ ಎಂದು ಹೇಳಿದಳು. ಆದರೆ ಅವಳ ದೇಹದ ಯಾವುದೇ ಭಾಗದಲ್ಲಿ ಯಾವುದೇ ಗಾಯಗಳಾಗಿರಲಿಲ್ಲ. ಹೀಗಾಗಿ, ಆಕೆಯನ್ನು ಪ್ರೀತಿಯಿಂದ ವಿಚಾರಿಸಿದಾಗ ಅಳುತ್ತಾ ತನ್ನ ಮೇಲೆ ನಡೆದ ಲೈಂಗಿಕ ಕಿರುಕುಳವನ್ನು ಹೇಳಿದಳು. ಮೂವರು ಹುಡುಗರು ಟೆರೇಸ್ಗೆ ಆಕೆಯನ್ನು ಕರೆದುಕೊಂಡು ಹೋಗಿ ಅಲ್ಲಿ ಅತ್ಯಾಚಾರ ನಡೆಸಿದ್ದಾರೆ ಎಂದು ಆ ಮಗುವಿನ ತಾಯಿ ತಿಳಿಸಿದ್ದಾರೆ.














Comments