ದೇಶದ ಹೆಮ್ಮೆಯ ಅಭಿನಂದನ್ ಈಗ FLY91 ಏರ್ಲೈನ್ಸ್ ಪೈಲಟ್
ಮಿಗ್-21 ಯುದ್ಧ ವಿಮಾನದಲ್ಲಿ ಪಾಕಿಸ್ತಾನದ ಎಫ್-16 ಅನ್ನು ಹೊಡೆದುರುಳಿಸಿ ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದ ಅಭಿನಂದನ್, ಈಗ ಖಾಸಗಿ ಏರ್ಲೈನ್ಸ್ನಲ್ಲಿ ಪೈಲಟ್ ಆಗಿ ಸೇರ್ಪಡೆಗೊಂಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಪಾಕಿಸ್ತಾನದ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ ಶತ್ರು ದೇಶದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದ ಭಾರತೀಯ ವಾಯುಪಡೆಯ ಮಾಜಿ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್, ಈಗ ತಮ್ಮ ವೃತ್ತಿಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಅವರು ಗೋವಾ ಮೂಲದ ಪ್ರಾದೇಶಿಕ ವಿಮಾನ ಯಾನ ಸಂಸ್ಥೆಯಾದ ಎಫ್ಎಲ್ವೈ91 ಕಂಪನಿಗೆ ಪೈಲಟ್ ಆಗಿ ಸೇರ್ಪಡೆಯಾಗಿದ್ದಾರೆ. Also Read 46 ವರ್ಷ ಪೈಲಟ್ ಆಗಿ ತಂದೆ ಸೇವೆ, ಕೊನೆಯ ಹಾರಾಟದಲ್ಲಿ ಮಗಳ ಭಾವುಕ ವಿದಾಯ! ತರಬೇತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅವರು ಈ ಮಾರ್ಗದಲ್ಲಿ ವಾಣಿಜ್ಯ ವಿಮಾನಗಳನ್ನು ಚಾಲನೆ ಮಾಡಲಿದ್ದಾರೆ ಎಂದು ಕಂಪನಿಯ ಮೂಲಗಳಿಂದ ತಿಳಿದುಬಂದಿದೆ. ಬಾಲಾಕೋಟ್ ಸಾಹಸದ ಹಿನ್ನೆಲೆ 2019ರ ಫೆಬ್ರವರಿ 14ರಂದು ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯು ಪುಲ್ವಾಮಾದಲ್ಲಿ ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಸೂಕ್ತ ಪ್ರತ್ಯುತ್ತರ ನೀಡಲು ಭಾರತೀಯ ಸೇನೆಯು ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಾಕೋಟ್ನಲ್ಲಿರುವ ಜೈಷ್ ಉಗ್ರರ ತರಬೇತಿ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿ ಧ್ವಂಸಗೊಳಿಸಿತು. ಪಾಕ್ನ ಯುದ್ಧ ವಿಮಾನ ಹೊಡೆದುರುಳಿಸಿದ ಅಭಿನಂದನ್ ಮರುದಿನ ಅಂದರೆ ಫೆಬ್ರವರಿ 27ರಂದಯ ಪಾಕಿಸ್ತಾನದ ಯುದ್ಧ ವಿಮಾನಗಳು ಭಾರತದ ಗಡಿ ದಾಟಿ ದಾಳಿ ನಡೆಸಲು ಯತ್ನಿಸಿದಾಗ, ಭಾರತೀಯ ವಾಯುಪಡೆಯು ತಕ್ಷಣವೇ ಪ್ರತಿದಾಳಿ ಮಾಡಿತು. ಈ ವೇಳೆ ತಮ್ಮ ಹಳೆಯ 'ಮಿಗ್-21' ವಿಮಾನದಲ್ಲಿದ್ದ ಅಭಿನಂದನ್ ಅವರು, ಅಮೆರಿಕ ನಿರ್ಮಿತ ಪಾಕಿಸ್ತಾನದ ಅತ್ಯಾಧುನಿಕ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದರು. ಈ ಮೂಲಕ ಭಾರತವೇ ಹೆಮ್ಮೆಪಡುವಂತೆ ಮಾಡಿದರು. ಪಾಕಿಸ್ತಾನ ವಶದಿಂದ ಅಭಿನಂದನ್ ಭಾರತಕ್ಕೆ ವಾಪಸ್ ಶತ್ರು ವಿಮಾನವನ್ನು ಹೊಡೆದುರುಳಿಸುವ ಕಾರ್ಯದಲ್ಲಿ ಅಭಿನಂದನ್ ಅವರ ಮಿಗ್-21 ವಿಮಾನವೂ ಹಾನಿಗೊಳಗಾಯಿತು. ಅವರು ಪ್ಯಾರಾಚೂಟ್ ಬಳಸಿಕೊಂಡು ಪ್ರಾಣಾಪಾಯದಿಂದ ಪಾರಾದರು. ಆದರೂ, ನಿಯಂತ್ರಣ ರೇಖೆ ದಾಟಿ ಪಾಕ್ ಆಕ್ರಮಿತ ಪ್ರದೇಶದಲ್ಲಿ ಬಿದ್ದರು. ಅಲ್ಲಿ ಪಾಕಿಸ್ತಾನ ಸೈನಿಕರು ಅವರನ್ನು ವಶಕ್ಕೆ ಪಡೆದು 3 ದಿನಗಳ ಕಾಲ ಬಂದಿಯಾಗಿಸಿಟ್ಟಿದ್ದರು. ಅಂತಾರಾಷ್ಟ್ರೀಯ ನಿಯಮಗಳಿಗೆ ಮಣಿದ ಪಾಕಿಸ್ತಾನ ಆದರೆ ಭಾರತ ಸರ್ಕಾರದ ತೀವ್ರ ರಾಜತಾಂತ್ರಿಕ ಒತ್ತಡ ಹಾಗೂ ಅಂತಾರಾಷ್ಟ್ರೀಯ ನಿಯಮಗಳಿಗೆ ಮಣಿದ ಪಾಕಿಸ್ತಾನ, ಮಾರ್ಚ್ 1ರಂದು ಅವರನ್ನು ಅಟ್ಟಾರಿ-ವಾಘಾ ಗಡಿಯ ಮೂಲಕ ಸುರಕ್ಷಿತವಾಗಿ ಭಾರತಕ್ಕೆ ಹಸ್ತಾಂತರಿಸಿತು. ಅಭಿನಂದನ್ ವರ್ಧಮಾನ್ ಅವರು ತಮ್ಮ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನಲ್ಲೇ ಪೂರೈಸಿದ್ದರು. ಗಡಿಯಲ್ಲಿ ತೋರಿದ ಅಪ್ರತಿಮ ಧೈರ್ಯ, ಶೌರ್ಯ ಮತ್ತು ದೇಶಪ್ರೇಮಕ್ಕಾಗಿ ಭಾರತ ಸರ್ಕಾರ ಅವರಿಗೆ 2021ರಲ್ಲಿ ದೇಶದ ಮೂರನೇ ಅತ್ಯುನ್ನತ ಮಿಲಿಟರಿ ಪ್ರಶಸ್ತಿಯಾದ 'ವೀರ ಚಕ್ರ' ನೀಡಿ ಗೌರವಿಸಿದೆ. ಇನ್ನು ಇದೀಗ ಈ ವೀರಯೋಧ ಅಭಿನಂದನ್ ವರ್ಧಮಾನ್ ಅವರು ಗೋವಾ ಮೂಲದ ಪ್ರಾದೇಶಿಕ ವಿಮಾನ ಯಾನ ಸಂಸ್ಥೆಯಾದ ಎಫ್ಎಲ್ವೈ91 ಕಂಪನಿಗೆ ಪೈಲಟ್ ಆಗಿ ಸೇರ್ಪಡೆಯಾಗಿದ್ದು, ಇವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಮುಂದಿನ ದಿನಗಳಲ್ಲಿ ಇವರು ಪ್ರಯಾಣಿಕರ ವಿಮಾನದ ಪೈಲಟ್ ಆಗಲಿದ್ದು, ಈಗಾಗಲೇ ವಿಶೇಷ ತರಬೇತಿ ಕಾರ್ಯಗಳು ಮುಂದುವರೆದಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.











Comments