ಸೆಪ್ಟೆಂಬರ್ನಲ್ಲೇ ಕರ್ನಾಟಕಕ್ಕೆ ಬೇಸಿಗೆ ಬಿಸಿ: ತಾಪಮಾನ ಏರಿಕೆ
ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳು ಬಂತೆಂದರೆ ರಾಜ್ಯದಲ್ಲಿ ಮಳೆಯ ಅಬ್ಬರದ ಜೊತೆಗೆ ವಾತಾವರಣ ಫುಲ್ ಕೂಲ್ ಕೂಲ್ ಆಗಿರುತ್ತದೆ. ಆದರೆ, ಈ ವರ್ಷ ಪರಿಸ್ಥಿತಿ ಸಂಪೂರ್ಣ ಬೇರೆ ರೀತಿನೇ ಇದೆ. ರಾಜ್ಯದಲ್ಲಿ ಇನ್ನೂ ಮಳೆಗಾಲ ಮುಗಿಯದಿದ್ದರೂ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಬೇಸಿಗೆಯ ಬೇಗೆ ಶುರುವಾಗಿದೆ. ಹೌದು, ಸೆಪ್ಟೆಂಬರ್ ಮೊದಲ ವಾರದಲ್ಲೇ ಹಲವು ಕಡೆ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿರುವುದು ಜನರಲ್ಲಿ ಆತಂಕ ಮೂಡಿಸಿದೆ. ವಾಡಿಕೆಯಷ್ಟು ಮಳೆಯಾಗದ ಹಿನ್ನೆಲೆಯಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಇಂದಿನ ಕರ್ನಾಟಕ ಹವಾಮಾನ ವರದಿ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ತಾಪಮಾನ ಏರಿಕೆ: ಯಾವ ಜಿಲ್ಲೆಯಲ್ಲಿ ಎಷ್ಟಿದೆ ಉಷ್ಣಾಂಶ? ರಾಜ್ಯದಲ್ಲಿ ಮಳೆ ಕೊರತೆಯಾಗಿರುವ ಪರಿಣಾಮ ಸೆಪ್ಟೆಂಬರ್ ತಿಂಗಳಲ್ಲೇ ಏಪ್ರಿಲ್, ಮೇ ತಿಂಗಳ ಬಿಸಿಲಿನ ಅನುಭವ ಆಗುತ್ತಿದೆ. ಭಾರತೀಯ ಹವಾಮಾನ ಇಲಾಖೆಯ ವರದಿಯ ಪ್ರಕಾರ, ಬುಧವಾರ ಬೆಂಗಳೂರಿನಲ್ಲಿ 30.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಉಳಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಪ್ರಮುಖವಾಗಿ ಕೊಪ್ಪಳದಲ್ಲಿ ಅತಿ ಹೆಚ್ಚು ಅಂದರೆ 36.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕಲಬುರಗಿಯಲ್ಲಿ 35.6, ಬಳ್ಳಾರಿಯಲ್ಲಿ 35, ಬಾಗಲಕೋಟೆಯಲ್ಲಿ 34.6, ರಾಯಚೂರಿನಲ್ಲಿ 34, ಬೀದರ್ನಲ್ಲಿ 33, ವಿಜಯಪುರ ಹಾಗೂ ಮೈಸೂರಿನಲ್ಲಿ 32, ಚಿತ್ರದುರ್ಗದಲ್ಲಿ 31, ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿರುವುದು ತಾಪಮಾನ ಏರಿಕೆಯ ತೀವ್ರತೆಯನ್ನ ತೋರಿಸುತ್ತಿದೆ. ಸೆಪ್ಟೆಂಬರ್ 3ರ ಮಳೆ ಮುನ್ಸೂಚನೆ: ಎಲ್ಲೆಲ್ಲಿ ಮಳೆಯಾಗಲಿದೆ? ಬಿಸಿಲಿನ ತಾಪದ ನಡುವೆಯೂ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಹವಾಮಾನ ಮುನ್ಸೂಚನೆಯ ಪ್ರಕಾರ, ಕರಾವಳಿ ಕರ್ನಾಟಕದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಆದರೆ, ಉತ್ತರ ಒಳನಾಡಿನಲ್ಲಿ ಮಳೆಯ ಪ್ರಮಾಣ ತುಸು ಕಡಿಮೆಯಾಗಲಿದ್ದು, ಬೆಳಗಾವಿ, ಧಾರವಾಡ, ಹಾವೇರಿ ಸೇರಿದಂತೆ ಕೆಲವೆಡೆ ಮೋಡ ಕವಿದ ವಾತಾವರಣದ ಜೊತೆಗೆ ತುಂತುರು ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರು ಹವಾಮಾನ: ಸಾಧಾರಣ ಮಳೆಯ ನಿರೀಕ್ಷೆ ಬಿಸಿಲಿನಿಂದ ಕಂಗೆಟ್ಟಿರುವ ರಾಜಧಾನಿ ಜನತೆಗೆ ಇಂದು ತುಸು ರಿಲೀಫ್ ಸಿಗುವ ಲಕ್ಷಣಗಳಿವೆ. ಇಂದು ನಗರದಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ರಿಂದ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ದಿನದ ಬಹುಪಾಲು ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ-ಒಳನಾಡು ಜಿಲ್ಲೆಗಳಲ್ಲಿ 5 ದಿನ ಮಳೆ ಎಚ್ಚರಿಕೆ ತಜ್ಞರ ಅಭಿಪ್ರಾಯ ಈ ಹವಾಮಾನದ ಬಗ್ಗೆ ಹವಾಮಾನ ತಜ್ಞರು ಕೂಡ ಮಾಹಿತಿ ಹಂಚಿಕೊಂಡಿದ್ದು, ರಾಜ್ಯದಲ್ಲಿ ಸದ್ಯಕ್ಕೆ ವಾಡಿಕೆ ಮಳೆಯ ಪ್ರಮಾಣ ಕಡಿಮೆಯಾಗಿರುವುದೇ ಈ ತಾಪಮಾನ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಮುಂದಿನ ಒಂದು ವಾರದವರೆಗೆ ಮಳೆಯ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಜ್ಞರು ಮಾಹಿತಿ ನೀಡಿದ್ದಾರೆ.












Comments