ಟಿಕೆಟ್ ದರ ಏರಿಕೆ ಕುರಿತು ಪವನ್ ಕಲ್ಯಾಣ್ ಮಾತು ವೈರಲ್
ಸಿನಿಮಾ ಟಿಕೆಟ್ ದರ ಹೆಚ್ಚಳ ಮಾಡೋದಕ್ಕೆ ಪ್ರೇಕ್ಷಕನಿಗೆ ಕೋಪ ಇದೆ. ಅದರಲ್ಲೂ ಕರ್ನಾಟಕದಲ್ಲಿ ದೊಡ್ಡ ಬಜೆಟ್ ಸಿನಿಮಾಗಳು ಬರುತ್ತವೆ ಎಂದಾಗ ಬೇಕಾಬಿಟ್ಟಿ ಟಿಕೆಟ್ ದರ ಏರಿಸಿ, ಪ್ರೇಕ್ಷಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಈ ವಿಷಯವಾಗಿ ಪವನ್ ಕಲ್ಯಾಣ್ ಮಾತನಾಡಿದ್ದಾರೆ. ‘ಟಿಕೆಟ್ ದರ ಏರಿಕೆ ಪ್ರೇಕ್ಷಕನ ಮೇಲೆ ಮಾಡುವ ಶೋಷಣೆ ಅಲ್ಲ’ ಎಂದು ಹೇಳಿದ್ದಾರೆ. ಅವರ ಹೇಳಿಕೆಗೆ ಪರ ವಿರೋಧ ಚರ್ಚೆಗಳು ನಡೆದಿವೆ.
ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಅಲ್ಲಿ ಪವನ್ ಕಲ್ಯಾಣ್ ಮಾತನಾಡಿದ್ದಾರೆ. ‘ಎಲ್ಲಾ ಉದ್ಯಮಗಳ ಸಿನಿಮಾಗಳು ಗೆಲ್ಲಲಿ ಎಂದು ನಾನು ಬಯಸುತ್ತೇನೆ. ಯಾರಿಗೂ ತಾರತಮ್ಯ ಮಾಡುವುದಿಲ್ಲ . ಜೂನಿಯರ್ ಎನ್‌ಟಿಆರ್, ಮಹೇಶ್ ಬಾಬು ಅಥವಾ ಪ್ರಭಾಸ್ ಯಾರೇ ನಟಿಸಿದ ಚಿತ್ರವಾದರೂ ಪ್ರತಿ ಸಿನಿಮಾ ದೊಡ್ಡ ಯಶಸ್ಸನ್ನು ಕಾಣಬೇಕೆಂದು ಹಾರೈಸುತ್ತೇನೆ’ ಎಂದು ಅವರು ಹೇಳಿದರು.
ಕನ್ನಡದ ಬ್ಲಾಕ್‌ಬಸ್ಟರ್ ಚಿತ್ರ ‘ಕಾಂತಾರ’ ಸಿನಿಮಾದ ಯಶಸ್ಸನ್ನು ಉದಾಹರಣೆಯಾಗಿ ನೀಡಿದರು. ‘ಭಾಷೆ ಅಥವಾ ಸಿನಿಮಾದಲ್ಲಿ ಯಾರು ನಟಿಸಿದ್ದಾರೆ ಎಂಬುದನ್ನು ಲೆಕ್ಕಿಸಬಾರದು. ತೆಲುಗು ಚಿತ್ರಗಳು ಕರ್ನಾಟಕದಲ್ಲಿ ಹಿನ್ನಡೆಯನ್ನು ಎದುರಿಸುತ್ತಿವೆ. ಆದರೂ ಕಾಂತಾರದಂತಹ ಚಿತ್ರದ ಬಗ್ಗೆ ನಾನು ಎಂದಿಗೂ ಕೆಟ್ಟದಾಗಿ ಭಾವಿಸಿಲ್ಲ. ಏಕೆಂದರೆ ಅದು ಭಾರತೀಯ ಚಿತ್ರವಾಗಿದ್ದು, ಅದನ್ನು ಪ್ರೋತ್ಸಾಹಿಸಬೇಕಾಗಿದೆ’ ಎಂದು ಅವರು ಹೇಳಿದರು.
ಟಿಕೆಟ್ ದರ ಏರಿಕೆಯ ಬಗ್ಗೆ ಮಾತನಾಡಿದ ಪವನ್ ಕಲ್ಯಾಣ್, ‘ಅದನ್ನು ಶೋಷಣೆ ಎಂದು ನೋಡಬಾರದು. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವುದು ಕಡ್ಡಾಯವಲ್ಲ. ಈಗ ಪ್ರೇಕ್ಷಕರು ನೆಟ್‌ಫ್ಲಿಕ್ಸ್, ಅಮೇಜಾನ್ ಸೇರಿದಂತೆ ಅನೇಕ ಪ್ಲಾಟ್‌ಫಾರ್ಮ್’ ಆಯ್ಕೆ ಹೊಂದಿದ್ದಾರೆ ಎಂದು ಅವರು ಹೇಳಿದರು. ನಿರ್ಮಾಪಕರು ದೊಡ್ಡ ಮೊತ್ತವನ್ನು ಹಾಕಿರುತ್ತಾರೆ. ಅದಕ್ಕೆ ಪ್ರತಿಯಾಗಿ ಹಣ ಪಡೆಯಬೇಕು ಎಂಬ ಕಾರಣಕ್ಕೆ ಟಿಕೆಟ್ ದರ ಹೆಚ್ಚಿಸಲಾಗುತ್ತದೆ ಎಂದು ಅವರು ಹೇಳಿದರು.
ಆಂಧ್ರದಲ್ಲಿ ಟಿಕೆಟ್ ದರ ಹೆಚ್ಚಿಸೋದಾದರೆ ಸರ್ಕಾರದ ಒಪ್ಪಿಗೆ ಬೇಕು. ಅದು ಕೂಡ ಕೆಲವೇ ದಿನ ಮಾತ್ರ ಟಿಕೆಟ್ ದರ ಹೆಚ್ಚಿಸಲ ಅವಕಾಶ ಇರುತ್ತದೆ. ಆದರೆ, ಕರ್ನಾಟಕದಲ್ಲಿ ಈ ರೀತಿಯ ಯಾವುದೇ ಕಟ್ಟುಪಾಡು ಇಲ್ಲ. ಹೀಗಾಗಿ, ಇದೊಂದು ದಬ್ಬಾಳಿಕೆ ಎಂದೇ ಪರಿಗಣಿಸಲಾಗುತ್ತದೆ














Comments