ಅಧಿಕಾರಿಗಳ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ: ಗ್ರಾಮಸ್ಥರ ಆರೋಪ
ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಮೂಲಸೌಕರ್ಯಗಳ ಕೊರತೆ ಮತ್ತು ಕಟ್ಟಡಗಳ ಶಿಥಿಲಾವಸ್ಥೆ ಕುರಿತು ಆಗಾಗ ವರದಿಗಳು ಬರುತ್ತಲೇ ಇರುತ್ತವೆ. ಇದೀಗ ಇಂತಹದ್ದೇ ಒಂದು ಆತಂಕಕಾರಿ ಘಟನೆ ಬಾಗಲಕೋಟೆ ತಾಲೂಕಿನಲ್ಲಿ ನಡೆದಿದೆ. ತರಗತಿಯಲ್ಲಿ ಪಾಠ ಕೇಳುತ್ತಿದ್ದಾಗಲೇ ಸರ್ಕಾರಿ ಶಾಲೆಯ ಛಾವಣಿ ಕುಸಿದ ಪರಿಣಾಮ ಆರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಮಕ್ಕಳ ಮತ್ತು ಪೋಷಕರ ತೀವ್ರ ಆತಂಕ ಮನೆ ಮಾಡಿದೆ. ಈ ಘಟನೆಯು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಸುರಕ್ಷತಾ ವ್ಯವಸ್ಥೆಯ ವೈಫಲ್ಯವನ್ನಾ ಮತ್ತೆ ಎತ್ತಿ ತೋರಿಸಿದೆ. ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾ ಸರ್ಕಾರಿ ಶಾಲೆಯಲ್ಲಿ ಎಂದಿನಂತೆ ಬುಧವಾರ ತರಗತಿಗಳು ನಡೆಯುತ್ತಿದ್ದವು. ವಿದ್ಯಾರ್ಥಿಗಳು ತರಗತಿಯಲ್ಲಿ ಕುಳಿತು ಶಿಕ್ಷಕರು ಮಾಡುತ್ತಿದ್ದ ಪಾಠವನ್ನು ಅತ್ಯಂತ ಆಸಕ್ತಿಯಿಂದ ಕೇಳುತ್ತಿದ್ದರು. ಇದೇ ವೇಳೆ, ಶಾಲಾ ಕಟ್ಟಡದ ಮೇಲ್ಛಾವಣಿಯ ಒಂದು ಭಾಗ ದಿಢೀರನೆ ಮಕ್ಕಳ ಮೇಲೆಯೇ ಕುಸಿದು ಬಿದ್ದಿದೆ. ಕಟ್ಟಡವು ಮೊದಲೇ ಶಿಥಿಲಾವಸ್ಥೆಯಲ್ಲಿತ್ತು ಎಂದು ಹೇಳಲಾಗಿದ್ದು, ಈ ಅನಿರೀಕ್ಷಿತ ಘಟನೆಯಿಂದ ಮಕ್ಕಳು ತೀವ್ರ ಭಯಭೀತರಾಗಿ ಕಿರುಚಾಡಿದ್ದಾರೆ. ಮಗಳಿಗೆ ಸ್ಫೂರ್ತಿಯಾದ ರಮಾಬಾಯಿ ತಕ್ಷಣವೇ ಎಚ್ಚೆತ್ತ ಶಿಕ್ಷಕರು ಮತ್ತು ಸ್ಥಳೀಯರು ಮಕ್ಕಳನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾದರು. ಕುಸಿದು ಬಿದ್ದ ಛಾವಣಿಯ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮಕ್ಕಳನ್ನು ಹೊರತೆಗೆಯುವಲ್ಲಿ ಶಾಲಾ ಸಿಬ್ಬಂದಿ ತ್ವರಿತವಾಗಿ ಕಾರ್ಯನಿರ್ವಹಿಸಿದ್ದಾರೆ. 6 ವಿದ್ಯಾರ್ಥಿಗಳಿಗೆ ಗಾಯ ಛಾವಣಿಯ ಅವಶೇಷಗಳು ಮೈಮೇಲೆ ಬಿದ್ದ ಪರಿಣಾಮ ತರಗತಿಯಲ್ಲಿದ್ದ ಸುಮಾರು ಆರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ತಕ್ಷಣವೇ ಗಾಯಗೊಂಡ ಮಕ್ಕಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಮಕ್ಕಳ ಸಣ್ಣ ಪ್ರಮಾಣದ ಗಾಯಗಳಾಗಿದ್ದು ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂಬುದು ವೈದ್ಯರ ತಪಾಸಣೆ ಬಳಿಕ ತಿಳಿದುಬಂದಿದೆ. ಈ ಸರ್ಕಾರಿ ಶಾಲೆಯಲ್ಲಿ 1 ರಿಂದ 6ನೇ ತರಗತಿಯವರೆಗೆ ಇದೆ. ಇಲ್ಲಿ ಒಟ್ಟು 53 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ಒಟ್ಟು ಮೂರು ಕೊಠಡಿಗಳಿದ್ದು, ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದೆ. ಮೇಲ್ಛಾವಣಿ ಕುಸಿತದಿಂದ ಆರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಪ್ರೇಮ್, ರಾಕೇಶ್, ಮಹೇಶ್, ಸುನಿತಾ, ಸತೀಶ್ಗೆ ಗಾಯವಾದ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ. ಬಿಇಓ ವಾಹನದಲ್ಲಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ. ಶಾಲಾ ಕಟ್ಟಡವು ತುಂಬಾ ಹಳೆಯದಾಗಿದ್ದು, ಮಳೆಗಾಲದಲ್ಲಿ ಕಟ್ಟಡದ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ. ಮಕ್ಕಳ ಜೀವದ ಜೊತೆ ಆಟವಾಡುವುದು ಸರಿಯಲ್ಲ. ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಸಚಿವರು ಗಮನಹರಿಸಬೇಕು. ಹಳೆಯ ಕಟ್ಟಡವನ್ನು ಸಂಪೂರ್ಣವಾಗಿ ಕೆಡವಿ, ಮಕ್ಕಳ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಹೊಸ ಕಟ್ಟಡ ನಿರ್ಮಿಸಬೇಕು ಅಥವಾ ತುರ್ತಾಗಿ ಶಾಶ್ವತ ಶಾಲಾ ಕಟ್ಟಡ ದುರಸ್ತಿ ಕಾರ್ಯವನ್ನು ಕೈಗೊಂಡು ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕು ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ.













Comments