• Sep 11, 2026
  • NPN Log
    ರಾಜ್ಯದ ಆರ್ಥಿಕತೆಗೆ ಮತ್ತು ಉದ್ಯೋಗಾಂಕ್ಷಿಗಳಿಗೆ ಭಾರಿ ಸಿಹಿಸುದ್ದಿ ಹೊರಬಿದ್ದಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾಜ್ಯಮಟ್ಟದ ಉನ್ನತ ಮಟ್ಟದ ಒಪ್ಪಿಗೆ ಸಮಿತಿ ಸಭೆಯಲ್ಲಿ ಬರೋಬ್ಬರಿ 29,679 ಕೋಟಿ ರೂಪಾಯಿಗಳ ಬೃಹತ್ ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳಿಗೆ ಹಸಿರು ನಿಶಾನೆ ತೋರಿಸಲಾಗಿದೆ. ರಾಜ್ಯದ ಕೈಗಾರಿಕಾ ವಲಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ 9 ಹೊಸ ಹಾಗೂ 8 ಹೆಚ್ಚುವರಿ ಹೂಡಿಕೆಯ ಯೋಜನೆಗಳು ಸೇರಿದಂತೆ ಒಟ್ಟು 17 ಯೋಜನೆಗಳಿಗೆ ಒಪ್ಪಿಗೆ ಸೂಚಿಸಲಾಗಿದೆ. ಈ ಮಹತ್ವದ ನಿರ್ಧಾರದಿಂದ ಮುಂಬರುವ ದಿನಗಳಲ್ಲಿ ಬರೋಬ್ಬರಿ 66,360 ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಹೊಸದಾಗಿ ಅನುಮೋದನೆಗೊಂಡಿರುವ ಯೋಜನೆಗಳ ಪೈಕಿ ನವೀಕರಿಸಬಹುದಾದ ಇಂಧನ ಹಾಗೂ ಉತ್ಪಾದನಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ವೈಬ್ರನ್ಸಿ ರೆನ್ಯೂಅಬಲ್ ಎನರ್ಜೀಸ್ ಕಂಪನಿಯು 2,194.94 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, ಬರೋಬ್ಬರಿ 30 ಸಾವಿರ ಯುವಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲಿದೆ. ಹಾಗೆಯೇ, ಹೀರೋ ಫ್ಯೂಚರ್ ಎನರ್ಜೀಸ್ ಸಂಸ್ಥೆಯು 9,760 ಕೋಟಿ ರೂಪಾಯಿ ಬಂಡವಾಳ ಹಾಕುವ ಮೂಲಕ ಅತಿ ದೊಡ್ಡ ಹೂಡಿಕೆದಾರನಾಗಿ ಹೊರಹೊಮ್ಮಿದ್ದು, ಇದು 3,200 ಉದ್ಯೋಗ ಸೃಷ್ಟಿಸಲಿದೆ. ಇದರ ಜೊತೆಗೆ, ಮಹೀಂದ್ರ ಏರೋಸ್ಟ್ರಕ್ಚರ್ಸ್ 2,300 ಕೋಟಿ ರೂಪಾಯಿ (3,000 ಉದ್ಯೋಗ), ಏಕಸ್ ಕನ್ಸೂಮರ್ ಪ್ರಾಡಕ್ಟ್ಸ್ 1,104 ಕೋಟಿ ರೂಪಾಯಿ (4,813 ಉದ್ಯೋಗ), ಎಪ್ಸಿಲಾನ್ 1,500 ಕೋಟಿ ರೂಪಾಯಿ, ಟೊಯೋಟಾ ಕಿರ್ಲೋಸ್ಕರ್ 1,200 ಕೋಟಿ ರೂಪಾಯಿ, ನಿರಾಣಿ ಶುಗರ್ಸ್ 4,062 ಕೋಟಿ ರೂಪಾಯಿ, ಟ್ರೂಆಲ್ಟ್ ಬಯೋ ಎನರ್ಜಿ 2,988 ಕೋಟಿ ರೂ. ಹಾಗೂ ಲೈಟ್ ಹೌಸ್ ಆಲ್ಟರ್ನೇಟಿವ್ ಅಸೆಟ್ಸ್ 600 ಕೋಟಿ ರೂಪಾಯಿಗಳ ಬಂಡವಾಳವನ್ನು ತೊಡಗಿಸಲು ಮುಂದೆ ಬಂದಿವೆ. ಈ ಎಲ್ಲ ಸಂಸ್ಥೆಗಳ ಆಗಮನದಿಂದ ರಾಜ್ಯದಲ್ಲಿ ಉತ್ಪಾದನಾ ವಲಯವು ಗಣನೀಯ ಪ್ರಗತಿ ಕಾಣಲಿದೆ. ಎಂಎಸ್ ಪಿಎಲ್ ಕಂಪನಿಯು 884.25 ಕೋಟಿ ರೂಪಾಯಿ, ಎನ್ಶೂರ್ ರಿಲಯನ್ಸ್ ಪವರ್ ಸೊಲ್ಯೂಷನ್ಸ್ 250 ಕೋಟಿ ರೂಪಾಯಿ, ಹೋಂಡಾ ಕಾರ್ಸ್ 437 ಕೋಟಿ ರೂಪಾಯಿ, ಭೀಮಾ ಫೈನ್ ಕೆಮಿಕಲ್ಸ್ 605 ಕೋಟಿ ರೂಪಾಯಿ, ಸನ್ಸೇರಾ 492.24 ಕೋಟಿ ರೂಪಾಯಿ, ಟಿವಿಎಸ್ ಮೋಟಾರ್ಸ್ 1,050 ಕೋಟಿ ರೂಪಾಯಿ ಹಾಗೂ ಹ್ಯಾವೆಲ್ಸ್ ಇಂಡಿಯಾ 250 ಕೋಟಿ ರೂಪಾಯಿ ಹೆಚ್ಚುವರಿ ಹೂಡಿಕೆ ಮಾಡಲು ಸರ್ಕಾರದಿಂದ ಅನುಮೋದನೆ ಪಡೆದುಕೊಂಡಿವೆ. ಬಂಡವಾಳ ಹೂಡಿಕೆಗೆ ಒಪ್ಪಿಗೆ ನೀಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ. "ಕೈಗಾರಿಕೆಗಳಿಗೆ ಪರವಾನಿಗೆ ನೀಡುವ ಮುನ್ನ ಯೋಜನಾ ವರದಿಗಳನ್ನ ಸರಿಯಾಗಿ ಪರಿಶೀಲಿಸಬೇಕು. ಯೋಜನೆಗೆ ಅನುಮತಿ ನೀಡುವ ಮೊದಲೇ ಕಡ್ಡಾಯವಾಗಿ ಆಡಿಟ್ ನಡೆಯಲೇಬೇಕು. ಇದಕ್ಕಾಗಿ ಹೊಸ ಆಡಿಟ್ ತಂಡವನ್ನ ರಚಿಸಬೇಕು," ಎಂದು ಡಿಕೆಶಿ ಹಣಕಾಸು ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ರಾಜ್ಯ ಸರ್ಕಾರದ ಹೊಸ ಯೋಜನೆಗಳು: ನಿಯಮಗಳ ಕಟ್ಟುನಿಟ್ಟಿನ ಪಾಲನೆ ರಾಜ್ಯ ಸರ್ಕಾರದ ಕೈಗಾರಿಕಾ ನೀತಿಯಲ್ಲಿರುವ ಪ್ರತಿಯೊಂದು ಅಂಶಗಳನ್ನ ಕಡ್ಡಾಯವಾಗಿ ಮತ್ತು ಸಮರ್ಪಕವಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕೈಗಾರಿಕೆಗಳ ಸ್ಥಾಪನೆ ಮತ್ತು ಅವುಗಳ ವಿಸ್ತರಣೆಗೆ ಪೂರಕವಾದ ವಾತಾವರಣ ನಿರ್ಮಿಸಿ, ಅಗತ್ಯ ಉತ್ತೇಜನ ನೀಡಲು ಎಲ್ಲ ರೀತಿಯ ಕ್ರಮಗಳನ್ನ ಕೈಗೊಳ್ಳಬೇಕು ಎಂದು ಸಿಎಂ ಸಲಹೆ ನೀಡಿದರು. ಮಹಿಳೆಯರ ಶಕ್ತಿಯನ್ನು ಕೊಂಡಾಡಿದ ಡಿಕೆ ಶಿವಕುಮಾರ್ ಈ ಮಹತ್ವದ ಸಭೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್, ಪಿ.ಎಂ. ನರೇಂದ್ರ ಸ್ವಾಮಿ ಪಾಲ್ಗೊಂಡಿದ್ದರು. ಅಲ್ಲದೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಸೇರಿದಂತೆ ಸರ್ಕಾರದ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಯೋಜನೆಗಳ ಜಾರಿ ಕುರಿತು ಚರ್ಚೆ ನಡೆಸಿದರು.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion