ಕರ್ನಾಟಕದ 130 ಟಿಎಂಸಿ ನೀರಿನ ಬಳಕೆಗೆ ಕ್ರಮಕ್ಕೆ ಮನವಿ
ಕೇಂದ್ರ ಜಲಶಕ್ತಿ ಸಚಿವಾಲಯವು ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ಜಲ ಇಲಾಖಾ ಸಮಾವೇಶ-2026ರಲ್ಲಿ ಕರ್ನಾಟಕದ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದ ಉನ್ನತ ಮಟ್ಟದ ನಿಯೋಗ ಭಾಗವಹಿಸಿ, ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳು, ಜಲ ನಿರ್ವಹಣಾ ಸುಧಾರಣೆಗಳು ಹಾಗೂ ಅಂತಾರಾಜ್ಯ ಜಲವಿವಾದಗಳ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯಿತು. ಸಮಾವೇಶದಲ್ಲಿ ಕರ್ನಾಟಕದ ಜಲ ಹಿತಾಸಕ್ತಿಗೆ ಸಂಬಂಧಿಸಿದಂತೆ ಕೇಂದ್ರ ಮಟ್ಟದಲ್ಲಿ ಬಾಕಿ ಇರುವ ಅನುಮೋದನೆಗಳು ಮತ್ತು ಪ್ರಮುಖ ನೀರಾವರಿ ಯೋಜನೆಗಳ ಅನುಷ್ಠಾನದ ಕುರಿತು ಸಚಿವರು ಪ್ರಬಲ ವಾದ ಮಂಡಿಸಿದರು. Karnataka Water Issues: ಮೇಕೆದಾಟು ಯೋಜನೆ ಅನುಮೋದನೆಗೆ ಆಗ್ರಹ ಸಚಿವ ಎನ್. ಚಲುವರಾಯಸ್ವಾಮಿ ಅವರು ಸಭೆಯಲ್ಲಿ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಮೇಕೆದಾಟು, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3, ಕಳಸಾ-ಬಂಡೂರಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳ ಪ್ರಸ್ತುತ ಸ್ಥಿತಿಗತಿ ಮತ್ತು ಅವುಗಳ ಅಗತ್ಯತೆಯನ್ನು ವಿವರಿಸಿದರು. ಬೆಂಗಳೂರು ಮಹಾನಗರ ಸೇರಿದಂತೆ ಮಂಡ್ಯ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳ ಕುಡಿಯುವ ನೀರಿನ ಭದ್ರತೆ ಹಾಗೂ ಸಂಕಷ್ಟದ ವರ್ಷಗಳಲ್ಲಿ ನೀರಿನ ಸಮರ್ಪಕ ನಿರ್ವಹಣೆಗೆ ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಯ ಪರಿಷ್ಕೃತ ಡಿಪಿಆರ್ಗೆ ಕೇಂದ್ರ ಜಲ ಆಯೋಗ (CWC) ತಕ್ಷಣ ಅನುಮೋದನೆ ನೀಡಬೇಕು ಎಂದು ಸಚಿವರು ಬಲವಾಗಿ ಒತ್ತಾಯಿಸಿದರು. Also Read Mekedatu: ಮೇಕೆದಾಟು ಯೋಜನೆಗೆ ತಿರುವು: ತಿದ್ದುಪಡಿ DPR ಸಲ್ಲಿಸಲು ಕೇಂದ್ರ ಜಲ ಆಯೋಗ ಸೂಚನೆ Karnataka Water Issues: 130 ಟಿಎಂಸಿ ನೀರಿನ ಬಳಕೆಗೆ ಕ್ರಮಕ್ಕೆ ಮನವಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಡಿ ರಾಜ್ಯಕ್ಕೆ ಹಂಚಿಕೆಯಾಗಿರುವ 130 ಟಿಎಂಸಿ ನೀರಿನ ಸಮರ್ಪಕ ಬಳಕೆಗೆ ಅನುಕೂಲವಾಗುವಂತೆ , ಕೃಷ್ಣಾ ಜಲವಿವಾದ ನ್ಯಾಯಾಧಿಕರಣ-2ರ ಅಂತಿಮ ತೀರ್ಪನ್ನು ಕೇಂದ್ರ ಸರ್ಕಾರ ಅಧಿಕೃತ ಗೆಜೆಟ್ನಲ್ಲಿ ಶೀಘ್ರವಾಗಿ ಅಧಿಸೂಚಿಸಬೇಕು ಎಂದು ಕರ್ನಾಟಕದ ನಿಯೋಗ ಆಗ್ರಹಿಸಿತು. ಇದರಿಂದ ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ಸ್ಪಷ್ಟತೆ ದೊರೆಯಲಿದೆ ಎಂದು ತಿಳಿಸಲಾಯಿತು. ಕಳಸಾ-ಬಂಡೂರಿಗೂ ಕೇಂದ್ರದ ನೆರವು ಕೋರಿಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಕುಡಿಯುವ ನೀರಿನ ಅಗತ್ಯತೆಗಾಗಿ ರೂಪಿಸಲಾಗಿರುವ ಮಹದಾಯಿ ಕೊಳ್ಳದ ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆಗಳಿಗೆ ಬಾಕಿ ಇರುವ ಅರಣ್ಯ ಮತ್ತು ವನ್ಯಜೀವಿ ಅನುಮೋದನೆಗಳನ್ನು ತ್ವರಿತವಾಗಿ ನೀಡುವಂತೆ ಕೇಂದ್ರವನ್ನು ಕೋರಲಾಯಿತು. Recommended For You ಮೇಕೆದಾಟು ತಮಿಳುನಾಡಿಗೂ ಮಹತ್ವದ್ದು; 5 ಟಿಎಂಸಿ ಕುಡಿಯುವ ನೀರು ಬಳಸುತ್ತೇವಷ್ಟೇ: ವಿಜಯ್ - ಡಿ.ಕೆ ಶಿವಕುಮಾರ್ ಪಿಸುಮಾತು ವೈರಲ್! ಅದೇ ರೀತಿ, ಕೇಂದ್ರ ಬಜೆಟ್ನಲ್ಲಿ ಘೋಷಿಸಲಾಗಿರುವ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ನೆರವು ಸೇರಿದಂತೆ ಪರಿಷ್ಕೃತ ಅಂದಾಜು ಮೊತ್ತಕ್ಕೆ ಸಾರ್ವಜನಿಕ ಹೂಡಿಕೆ ಮಂಡಳಿ (PIB) ಶಿಫಾರಸು ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಯಿತು. ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಉಂಟಾಗುವ ವಿಳಂಬವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಕೈಗೊಂಡಿರುವ ಹಲವು ಕ್ಷೇತ್ರಮಟ್ಟದ ಹಾಗೂ ನೀತಿ ಸುಧಾರಣೆಗಳನ್ನೂ ಸಮಾವೇಶದಲ್ಲಿ ವಿವರಿಸಲಾಯಿತು. ಪ್ರಮುಖವಾಗಿ: * ಯುಕೆಪಿ-3 ಮಾದರಿಯ 'ಒಪ್ಪಿಗೆ ಪರಿಹಾರ ದರ' (Consent Award Rates) ಅನುಷ್ಠಾನ * ಲೋಕ ಅದಾಲತ್ ಮೂಲಕ ಭೂಸ್ವಾಧೀನ ವ್ಯಾಜ್ಯಗಳ ತ್ವರಿತ ಇತ್ಯರ್ಥ * ಎತ್ತೆತ್ತುವ ನೀರಾವರಿ ಯೋಜನೆಗಳ ಡಿಪಿಆರ್ ಮೌಲ್ಯಮಾಪನಕ್ಕೆ ಅಂದಾಜು ಪರಿಶೀಲನಾ ಸಮಿತಿ (ERC) ರಚನೆ * ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್ (KPPP) ಮೂಲಕ ಪಾರದರ್ಶಕ ಇ-ಟೆಂಡರಿಂಗ್ * ಭೂಸ್ವಾಧೀನದ ಪ್ರಮಾಣ ಕಡಿಮೆ ಮಾಡಲು ಪೈಪ್ಡ್ ನೀರಾವರಿ ಪದ್ಧತಿ ಅಳವಡಿಕೆ ಸೇರಿದಂತೆ ಹಲವು ಕ್ರಮಗಳನ್ನು ಕರ್ನಾಟಕದ ಮಾದರಿ ಸುಧಾರಣೆಗಳಾಗಿ ಸಭೆಯಲ್ಲಿ ಪ್ರಸ್ತುತಪಡಿಸಲಾಯಿತು. You May Also Like ಕಾವೇರಿ ವಿವಾದದ ನಡುವೆ ಸೆಪ್ಟೆಂಬರ್ 1ರಂದು ಮೆಟ್ಟೂರು ಡ್ಯಾಂ ಗೇಟ್ ತೆರೆಯಲಿರುವ ಸಿಎಂ ವಿಜಯ್ ದೇಶದ ಜಲ ಸವಾಲುಗಳ ಕುರಿತು ಚಿಂತನ-ಮಂಥನ ಸಮಾವೇಶದ ಮೊದಲ ಅಧಿವೇಶನದಲ್ಲಿ ದೇಶದ ವಿವಿಧ ರಾಜ್ಯಗಳ ಜಲಸಂಪನ್ಮೂಲ ಮತ್ತು ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆಗಳ ಸಚಿವರು, ಕಾರ್ಯದರ್ಶಿಗಳು ಹಾಗೂ ನೀತಿ ನಿರೂಪಕರೊಂದಿಗೆ ಭಾರತದ ಜಲ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳು ಮತ್ತು ಭವಿಷ್ಯದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಅತ್ಯಾಧುನಿಕ ಜಲ ಮೂಲಸೌಕರ್ಯ ನಿರ್ಮಾಣ, ಜಲ ಸಂರಕ್ಷಣೆ, ಮಳೆನೀರು ಕೊಯ್ಲು, ಕುಡಿಯುವ ನೀರಿನ ಮೂಲಗಳ ಸುಸ್ಥಿರತೆ, ಗ್ರಾಮೀಣ ನೀರು ಸರಬರಾಜು ಜಾಲದ ಆಧುನೀಕರಣ ಹಾಗೂ ಅಂತಾರಾಜ್ಯ ಜಲ ನಿರ್ವಹಣೆಯಲ್ಲಿ ಪರಸ್ಪರ ಸಹಕಾರದ ಕುರಿತು ಚರ್ಚಿಸಲಾಯಿತು. ಸಚಿವ ಈಶ್ವರ್ ಖಂಡ್ರೆ ಸೇರಿದಂತೆ ವಿವಿಧ ರಾಜ್ಯಗಳ ಸಚಿವರು ಮತ್ತು ಉನ್ನತ ಮಟ್ಟದ ನಿಯೋಗಗಳೊಂದಿಗೆ ಚಲುವರಾಯಸ್ವಾಮಿ ಚರ್ಚೆಯಲ್ಲಿ ಭಾಗವಹಿಸಿದರು. ಇದೇ ವೇಳೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸಿ ಕರ್ನಾಟಕದ ಪ್ರಮುಖ ನೀರಾವರಿ ಮತ್ತು ಜಲ ಸಂಬಂಧಿತ ವಿಷಯಗಳ ಕುರಿತು ಪ್ರಾಥಮಿಕ ಸಮಾಲೋಚನೆ ನಡೆಸಿದರು. 'ಜಲ ಸಂರಕ್ಷಣೆ ಸಾಮೂಹಿಕ ರಾಷ್ಟ್ರೀಯ ಹೊಣೆಗಾರಿಕೆ' ನೀರಿಗೆ ಯಾವುದೇ ಭೌಗೋಳಿಕ ಅಥವಾ ಆಡಳಿತಾತ್ಮಕ ಗಡಿಗಳಿರುವುದಿಲ್ಲ. ಜಲ ಸಂರಕ್ಷಣೆ ನಮ್ಮೆಲ್ಲರ ಸಾಮೂಹಿಕ ರಾಷ್ಟ್ರೀಯ ಹೊಣೆಗಾರಿಕೆಯಾಗಿದೆ. ಈ ಸಮಾವೇಶದಲ್ಲಿ ಮೂಡಿಬಂದ ದೂರದೃಷ್ಟಿಯ ಒಳನೋಟಗಳು ಜಲ ಸಮೃದ್ಧ ಹಾಗೂ ಸುಸ್ಥಿರ ಕರ್ನಾಟಕ ನಿರ್ಮಿಸುವ ನಮ್ಮ ಸಂಕಲ್ಪಕ್ಕೆ ಮತ್ತಷ್ಟು ಬಲ ತುಂಬಲಿವೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.














Comments