• Sep 11, 2026
  • NPN Log
    ರಾಜಧಾನಿ ಬೆಂಗಳೂರು ಕೆ.ಆರ್. ಮಾರುಕಟ್ಟೆಗೆ ಬೇರೆ ಬೇರೆ ಭಾಗಗಳಿಂದ ಬರುವ ರೈತರು, ವ್ಯಾಪಾರಿಗಳು, ವಹಿವಾಟುದಾರರ ಮೇಲೆ ಸರ್ಕಾರ ಆರ್ಥಿಕ ಬರೆ ಎಳೆದಿದೆ. ಮಾರುಕಟ್ಟೆಯನ್ನು ನೀವು ಸರಕುಗಳ ಸಮೇತ ಒಂದು ಬಾರಿ ಪ್ರವೇಶಿಸಿ, ನಿರ್ಗಮಿಸಲು 350 ರೂಪಾಯಿ ಶುಲ್ಕ ಕಟ್ಟಬೇಕೆಂಬ ನಿರ್ಧಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ( GBA) ಕೈಗೊಂಡಿದೆ. ಈ ಕುರಿತು ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನ ಕಟ್ಟುವ ತೆರಿಗೆ ಹಣ ಸಾಕಾಗಲಿಲ್ಲವೇ? ಎಂಬ ಚರ್ಚೆ ಜೋರಾಗಿದೆ. ಕೃಷ್ಣ ರಾಜೇಂದ್ರ ಮಾರುಕಟ್ಟೆ ಬೆಂಗಳೂರು ಕೇಂದ್ರ ನಗರ ಪಾಲಿಕೆ (BCCC) ವ್ಯಾಪ್ತಿಗೆ ಬರುತ್ತದೆ. ನಿರ್ವಹಣೆ, ದುರಸ್ತಿ ಕಾರಣಗಳ ನೆಪ ಹೇಳಿರುವ ಪಾಲಿಕೆಯು ಕೃಷಿ ಹಾಗೂ ಇತರ ಉತ್ಪನ್ನ ಹೊತ್ತು ಬರುವ ಸರಕು ಸೇವಾ ವಾಹನಗಳ ವರ್ಗವಾರು ಶುಲ್ಕ ವಿಧಿಸಲು ಪಟ್ಟಿ ಪ್ರಕಟಿಸಿದೆ. ಇದರಲ್ಲಿ ತರಕಾರಿ, ಹಣ್ಣು, ಮೊಟ್ಟೆ, ಸೊಪ್ಪು ಸೇರಿದಂತೆ ವಿವಿಧ ಸರಕುಗಳಿಗೂ ಪ್ರತ್ಯೇಕ ಶುಲ್ಕ ನಿಗದಿ ಮಾಡಲಾಗಿದೆ. ಮೊದಲಿಗೆ ಯಾವ ವಾಹನಗಳಿಗೆ ಎಷ್ಟೇಷ್ಟು ಶುಲ್ಕ? ಎಂಬ ವಿವರ ಇಲ್ಲಿದೆ. ಪ್ರವೇಶಕ್ಕೆ ವಾಹನವಾರು ಶುಲ್ಕ ಪಾವತಿಸಬೇಕು! ಪಾಲಿಕೆ ಪ್ರಕಾರ, ಮಾರುಕಟ್ಟೆ ಒಂದು ಬಾರಿ ಪ್ರವೇಶ/ನಿರ್ಗಮನಕ್ಕೆ ಲಾರಿ ಮತ್ತು ಟ್ರಕ್‌ಗಳಿಗೆ (6 ಚಕ್ರ, ಅದಕ್ಕಿಂತ ಹೆಚ್ಚಿನ ಚಕ್ರ) 350 ರೂಪಾಯಿ ನಿಗದಿ ಮಾಡಲಾಗಿದೆ. ಇನ್ನು ಲಘು ಮೋಟಾರು ವಾಹನಗಳ (ನಾಲ್ಕು ಚಕ್ರ) 100 ರೂಪಾಯಿ, ಆಟೋ, ಟಂಟಂನಂತಹ ಮೂರು ಚಕ್ರದ ವಾಹನಗಳಿಗೆ 75 ರೂಪಾಯಿ ಶುಲ್ಕ ಹೇರಿಕೆಗೆ ನಿರ್ಧರಿಸಲಾಗಿದೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಬರಗಾಲದಲ್ಲಿ ರೈತ ಕೆಂಗಟ್ಟಿದ್ದು, ಈ ವೇಳೆ ಇಂತಹ ನಿರ್ಧಾರ ಅನಗತ್ಯ ಎಂದು ಅನೇಕರು ದೂರಿದ್ದಾರೆ.ಮಾರುಕಟ್ಟೆ ಪ್ರವೇಶಿಸುವ ಮುನ್ನ ವಾಹನಗಳ ವರ್ಗಕ್ಕೆ ಅನುಗುಣವಾಗಿ ಶುಲ್ಕ ಪಾವತಿಸಿ ಅನುಮತಿ ಪಡೆಯಬೇಕು. ಇನ್ನು ವಾಹನದಲ್ಲಿರುವ ಸರಕುಗಳಿಗೆ ಪ್ರತ್ಯೇಕ ಶುಲ್ಕ ಇರಲಿದ್ದು, ಎರಡು ಸೇರಿಸಿ ಕಟ್ಟಿ ನೀವು ಒಳ ಪ್ರವೇಶಿಸಬೇಕು. ಅಲ್ಲಿಂದ ಒಮ್ಮೆ ಹೊರ ಬಂದರೆ ಮತ್ತೆ ಒಳಹೋಗಲು, ಲೋಡ್ ಮಾಡಲು, ಅನ್‌ಲೋಡ್ ಮಾಡಲು ಮತ್ತೆ ಪ್ರವೇಶ ಶುಲ್ಕ ಪಾವತಿಸಬೇಕಾದ ಸ್ಥಿತಿ ಎದುರಾಗಲಿದೆ. ಹೂವುಗಳು, ಹಣ್ಣುಗಳು, ತರಕಾರಿ, ಸೊಪ್ಪುಗಳು, ಇನ್ನಿತರ ನಿರ್ದಿಷ್ಟ ಸರಕುಗಳ ಚೀಲಗಳಿಗೆ ಒಂದು ಚೀಲ 5 ರೂಪಾಯಿ ಪಾವತಿಸಬೇಕು. ನೆಲಗಡಲೇ, ಹತ್ತಿ, ಸಿಹಿ ಕಾರ್ನ್, ಶುಂಠಿ, ಅರಿಶಿಣ, ಬಾಳೆ ಕಂಡಾ, ಬಿದಿರು ಮತ್ತು ಕಬ್ಬು, ಆಲೋಗಡ್ಡೆ, ಈರುಳ್ಳಿ, ಬೆಳ್ಳುಳ್ಳಿಗೆ 5 ರೂಪಾಯಿ. ಮೊಟ್ಟೆಗಳ 10 ಟ್ರೇ ಇರುವ ಒಂದು ಬಾಕ್ಸ್‌ಗೆ 10 ರೂಪಾಯಿಯಂತೆ ಶುಲ್ಕ ಪಾವತಿಸುವುದು ಕಡ್ಡಾಯಗೊಳಿಸಲಾಗುತ್ತಿದೆ. ಈ ಸಂಬಂಧ ಪಾಲಿಕೆ ಸುಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಹಣ ಉತ್ಪನ್ನ ತರುವ ರೈತರು, ವಾಹನ ಚಾಲಕರು, ವ್ಯಾಪಾರಿಗಳು, ಕಮಿಷನ್ ಏಜೆಂಟ್,ಸಾಗಣೆದಾರರು ಸೇರಿದಂತೆ ಎಲ್ಲರ ಮೇಲೆ ಬೀಳಲಿದೆ. ಮಾರುಕಟ್ಟೆ ನಿರ್ವಹಣೆ, ಸ್ವಚ್ಛತೆ, ದುರಸ್ತಿ, ಅಭಿವೃದ್ಧಿಗಾಗಿ ಶುಲ್ಕ ವಿಧಿಸಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಅನುಮೋದಿತ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರು ಆಕ್ರೋಶ, ಆನ್‌ಲೈನ್‌ನಲ್ಲಿ ಜೋರು ಚರ್ಚೆ! 'ರಿಪೇರಿ, ನಿರ್ವಹಣೆ, ಅಭಿವೃದ್ಧಿ ಹೆಸರಿನಲ್ಲಿ ಈ ರೀತಿ ಮನಬಂದಂತೆ ಶುಲ್ಕ ವಿಧಿಸಬಾರದು. ಜನರಿಂದ ಸರ್ಕಾರ ಪಡೆಯುವ ಸುಂಕ, ಆದಾಯ ತೆರಿಗೆ, ಆಸ್ತಿ ತೆರಿಗೆ, ರಸ್ತೆ ಸುಂಕ ಇವೆಲ್ಲವು ಯಾವುದಕ್ಕೆ ಬಳಕೆ ಆಗುತ್ತಿದೆ. ಸಾರ್ವಜನಿಕ ಸ್ಥಳ, ಆಸ್ತಿ ಬಳಕೆಗೆ ಜನರು ಹಣ ನೀಡಬೇಕೆ?' ಎಂದು ಜನ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಮಾರಾಟಗಾರರು ಪ್ರತಿಭಟನೆ ನಡೆಸಿದ ಈ ನಿರ್ಧಾರ ಹಿಂಪಡೆಯುತ್ತಾರೆ' ಎಂದು ಮತ್ತೊಬ್ಬರು ತಿಳಿಸಿದ್ದಾರೆ. 'ಈಗಾಗಲೇ ರೈತರು ಬೆಲೆ ಸಿಗದೇ ಒದ್ದಾಡುತ್ತಿದ್ದಾರೆ. ವಾಹನ ಬಾಡಿಗೆ ನೀಡಿ ಉತ್ಪನ್ನ ತರುತ್ತಾರೆ. ಚಾಲಕರು ಇದರ ಹಣವನ್ನು ರೈತರಿಂದಲೇ ವಸೂಲಿ ಮಾಡುತ್ತಾರೆ. ಇದು ರೈತರಿಗೆ ಹೆಚ್ಚುವರಿ ಹೊರ ಆಗಲಿದೆ' ಎಂದೆಲ್ಲ ಚರ್ಚೆಗಳು ಶುರುವಾಗಿವೆ. ಬಹುತೇಕ ಮಂದಿ ಸರ್ಕಾರದ ಶುಲ್ಕ ನಿರ್ಧಾರವನ್ನು ಖಂಡಿಸಿದ್ದಾರೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion