ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಎಡಿಬಿ ಬ್ಯಾಂಕ್ ಸಾಲ: ಸಚಿವರ ಮಾಹಿತಿ
ಸರ್ಕಾರಿ ಶಾಲೆಗಳು ಮತ್ತು ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ ಕರ್ನಾಟಕ ಸರ್ಕಾರದ 'ಕರ್ನಾಟಕ ಪಬ್ಲಿಕ್ ಶಾಲೆಗಳ' ಸ್ಥಾಪನೆಗೆ ಎಡಿಬಿ ಬ್ಯಾಂಕ್ ಸಾಲ ನೀಡಲು ಮುಂದೆ ಬಂದಿದೆ. ಮುಂದಿನ ಒಂದು ವರ್ಷದಲ್ಲಿ ರಾಜ್ಯದಲ್ಲಿ ಕೆಪಿಎಸ್ ಕ್ರಾಂತಿ ನಡೆಯಲಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಸೊರಬದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಎಡಿಬಿ ಬ್ಯಾಂಕ್ ಜೊತೆಗೆ ಎಜಾಕ್ ಸಂಸ್ಥೆಯಂತಹ ಅನೇಕ ಕಂಪನಿಗಳು, ಸಂಸ್ಥೆಗಳು "ಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ" (CCSR) ಅಡಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣಕ್ಕೆ ಕೈಜೋಡಿಸಿವೆ ಎಂದರು. ಶೀಘ್ರ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಮಾತನಾಡಿದ ಸಚಿವರು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಸಾಧ್ಯವಾದಷ್ಟು ಬೇಗ ಚುನಾವಣೆ ನಡೆಸಬೇಕು ಎಂಬುದು ನಮ್ಮ ಆಶಯ ಸರ್ಕಾರದ್ದು ಎಂದು ಮಾಹಿತಿ ಕೊಟ್ಟರು. Also Read KPSC Exam Scam: ಹಗರಣದಲ್ಲಿ ಸಚಿವರ ಹೆಸರು? ಪ್ರಿಯಾಂಕ್ ಖರ್ಗೆ ವಿರುದ್ಧ ಆರ್.ಅಶೋಕ್ ಸ್ಫೋಟಕ ಆರೋಪ ಪಾಪ ತೊಳೆದುಕೊಳ್ಳಲು ಬಿಜೆಪಿ ಪಾದಯಾತ್ರೆ ಜನಪರ ಆಡಳಿತ ನೀಡುತ್ತಿರುವ ನಮ್ಮ ಸರ್ಕಾರದ ಬಗ್ಗೆ ಪ್ರಶ್ನಿಸಲು ಸೂಕ್ತ ವಿಷಯಗಳೇ ಇಲ್ಲದ ಕಾರಣ ಬಿಜೆಪಿಯವರು ಮಾಡಿದ ಪಾಪ ತೊಳೆದುಕೊಳ್ಳಲು ಪಾದಯಾತ್ರೆ ನಡೆಸುತ್ತಿದ್ದಾರೆ. ಆರೋಪ ಮಾಡಿದರೆಂಬ ಕಾರಣಕ್ಕೆ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿಯಾಗಿದೆ. ಆದರೂ ಬಿಜೆಪಿಯವರು ಈ ವಿಚಾರದಲ್ಲಿ ಇನ್ನೂ ಬಾಯಿ ಬಡಿದುಕೊಳ್ಳುವುದನ್ನು ಬಿಟ್ಟಿಲ್ಲ ಎಂದು ಕುಟುಕಿದರು. ಬಿಜೆಪಿಗೆ ರಾಜ್ಯದ ಹಿತಾಸಕ್ತಿ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ. ಬಿ.ನಾಗೇಂದ್ರ ಅವರ ವಿಷಯವನ್ನು ಮುಂದಿಟ್ಟುಕೊಂಡು ವಿಧಾನಸಭೆಯ ಮುಂಗಾರು ಅಧಿವೇಶನವನ್ನು ಬಿಜೆಪಿಯವರು ಹಾಳು ಮಾಡಿದರು. ರಾಜ್ಯದಲ್ಲಿನ ಬರಗಾಲ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಅವರಿಗೆ ಇಷ್ಟವಿಲ್ಲ. ಕಸ್ತೂರಿ ರಂಗನ್ ವರದಿ ಬಗ್ಗೆಯೂ ಮಾತನಾಡುವುದಿಲ್ಲ. ಒಟ್ಟಾರೆ ರಾಜ್ಯದ ಹಿತಾಸಕ್ತಿ ಬಗ್ಗೆ ಬಿಜೆಪಿಗೆ ಎಳ್ಳಷ್ಟೂ ಕಾಳಜಿ ಇಲ್ಲ ಎಂದು ಆರೋಪಿಸಿದರು. ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಬಿಹಾರ, ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬಿಜೆಪಿಯ 'ವಾಷಿಂಗ್ ಮೆಷಿನ್' ಮೂಲಕ ಎಷ್ಟು ಮಂದಿ ಸ್ವಚ್ಛರಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೆದರಿಸುವುದೇ ಬಿಜೆಪಿಯವರ ಗುಣ ಮತ್ತು ರಾಜಕೀಯ ಬಂಡವಾಳವಾಗಿದೆ ಎಂದು ಟೀಕಿಸಿದರು. Recommended For You Property Good News: ರಾಜ್ಯದ ಬಡವರಿಗೆ 4 ರಿಂದ 5 ಸಾವಿರ ನಿವೇಶನ ಹಂಚಿಕೆ: ಜಿ.ಪರಮೇಶ್ವರ ಗ್ಯಾರಂಟಿ ಯೋಜನೆಗಳು ಕರ್ನಾಟಕದಲ್ಲಿ ಯಶಸ್ವಿ ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಇಡೀ ದೇಶದಲ್ಲಿಯೇ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡಿರುವುದು ಕರ್ನಾಟಕದಲ್ಲಿ ಮಾತ್ರ. ಇದೀಗ ಕ್ಷೇತ್ರದ ಅಭಿವೃದ್ಧಿಗೂ ಸರಣಿ ಸಭೆಗಳನ್ನು ನಡೆಸುತ್ತಿದ್ದೇನೆ ಎಂದು ಹೇಳಿದರು. ಮೊದಲ ಹಂತದಲ್ಲಿ 13 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹಳ್ಳಿಗಳ ಸಮಸ್ಯೆಗಳನ್ನು ಆಲಿಸಲಾಗಿದ್ದು, ಎರಡನೇ ಹಂತದಲ್ಲಿ ಇಂದು 11 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಜನರ ಸಮಸ್ಯೆಗಳಿಗೆ ಕಿವಿಯಾಗಿದ್ದೇನೆ. ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಡಿಸೆಂಬರ್ ಒಳಗೆ ಪ್ರತಿ ಹಳ್ಳಿಗೂ ಭೇಟಿ ಡಿಸೆಂಬರ್ ಒಳಗೆ ಸೊರಬ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಖುದ್ದಾಗಿ ಭೇಟಿ ನೀಡಲಿದ್ದೇನೆ. ಎರಡನೇ ಬಾರಿಗೂ ನಮ್ಮ ಪಕ್ಷ ನನ್ನ ಮೇಲೆ ವಿಶ್ವಾಸವಿಟ್ಟು ಸಚಿವ ಸ್ಥಾನ ನೀಡಿದೆ. ಶಿಕ್ಷಣ ಇಲಾಖೆಯಲ್ಲಿ ಬದಲಾವಣೆ ತರುವುದರ ಜೊತೆಗೆ ನನ್ನ ಕ್ಷೇತ್ರದ ಅಭಿವೃದ್ಧಿಗೂ ಆದ್ಯತೆ ನೀಡುತ್ತೇನೆ ಎಂದು ಮಾಹಿತಿ ಕೊಟ್ಟರು.














Comments