• Sep 11, 2026
  • NPN Log
    ನಾವು ಕಾಂಗ್ರೆಸ್ಸಿಗರು ಈ ಕೇಸು, ಜೈಲುಗಳಿಗೆಲ್ಲ ಹೆದರುವವರಲ್ಲ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಭೆ ನಡೆಸಿದ್ದ ಉತ್ತರಾಖಂಡದ ಹಲ್ದ್ವಾನಿ ಮೈದಾನದಲ್ಲಿ ಕೆಲವರು ಶುದ್ಧೀಕರಣ ಕಾರ್ಯಕ್ರಮ ನಡೆಸಿದ್ದರು. ಇದನ್ನು ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ಎಂದು ರಾಹುಲ್ ಗಾಂಧಿ ಅವರು ತೀವ್ರವಾಗಿ ಖಂಡಿಸಿದ್ದರು. ಈ ಹೇಳಿಕೆಯ ವಿರುದ್ಧ ರಾಜಕೀಯ ದ್ವೇಷದಿಂದ ಸುಳ್ಳು ಹಾಗೂ ದುರುದ್ದೇಶಪೂರಿತ ಎಫ್‌ಐಆರ್ ದಾಖಲಿಸಿದ ಹಿನ್ನೆಲೆ ಇಂದು ಕೆಪಿಸಿಸಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ದೇಶ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಜನರಿಗೆ ಮನದಟ್ಟು ಮಾಡಿಕೊಡುವುದು ನಮ್ಮ ಕರ್ತವ್ಯ. ನಾವೆಲ್ಲರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ನಾನು ಆಗಾಗ ಒಂದು ಮಾತನ್ನು ಹೇಳುತ್ತೇನೆ: "ಕಾಂಗ್ರೆಸ್‌ ಶಕ್ತಿಯೇ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸವೇ ಈ ದೇಶದ ಇತಿಹಾಸ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ, ಎಲ್ಲಾ ವರ್ಗದ ಜನರೂ ಅಧಿಕಾರಕ್ಕೆ ಬಂದಂತೆ." ಗಾಂಧಿ ಕುಟುಂಬವು ಈ ದೇಶವನ್ನು ಹಾಗೂ ಕಾಂಗ್ರೆಸ್‌ ಪಕ್ಷವನ್ನು ಒಗ್ಗಟ್ಟಾಗಿ ಇಡಲು ತನ್ನದೇ ಆದ ಅನೇಕ ತ್ಯಾಗ-ಬಲಿದಾನಗಳನ್ನು ಮಾಡಿದೆ. ಈ ರಾಷ್ಟ್ರಧ್ವಜ, ಸಂವಿಧಾನ ಮತ್ತು ಎಲ್ಲರ ಬದುಕಿಗೆ ಭದ್ರಬುನಾದಿ ಒದಗಿಸಿದ್ದು ಕಾಂಗ್ರೆಸ್‌ ಪಕ್ಷ. ಈ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್. ಬಿಜೆಪಿಯಾಗಲಿ ಅಥವಾ ಎನ್‌ಡಿಎ ಮೈತ್ರಿಕೂಟದ ಬೇರೆ ಯಾವುದೇ ಪಕ್ಷವಾಗಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ. ಒಂದು ವರ್ಷದ ಹಿಂದೆ ಬೆಳಗಾವಿಯಲ್ಲಿ ನಾವು 'ಜೈ ಬಾಪು - ಜೈ ಭೀಮ್ - ಜೈ ಸಂವಿಧಾನ' ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧೀಜಿಯವರು ವಹಿಸಿದ್ದರು, ಇಂದು ಅದೇ ಅಧ್ಯಕ್ಷ ಸ್ಥಾನವನ್ನು ನಮ್ಮ ಮಲ್ಲಿಕಾರ್ಜುನ ಖರ್ಗೆಯವರು ಅಲಂಕರಿಸಿದ್ದಾರೆ. ನಾವು ಕಾಂಗ್ರೆಸ್ಸಿಗರು ಈ ಕೇಸು, ಜೈಲುಗಳಿಗೆಲ್ಲ ಹೆದರುವವರಲ್ಲ. ನಾವು 'ಕಳ್ಳರನ್ನು ಹಿಡಿಯಿರಿ' ಎಂದು ಹೇಳಿದರೆ, ಬಿಜೆಪಿ ನೇತೃತ್ವದ ಸರ್ಕಾರ ಹಾಗೆ ಹೇಳಿದವರ ವಿರುದ್ಧವೇ ಪ್ರಕರಣ ದಾಖಲಿಸುತ್ತಿದೆ. ಬಿಜೆಪಿ ಈ ರೀತಿಯ ನೂರು ಕೇಸುಗಳನ್ನು ಹಾಕಿದರೂ ರಾಹುಲ್‌ ಗಾಂಧಿಯವರು ಹೆದರುವವರಲ್ಲ. ಅವರ ರಕ್ತದಲ್ಲೇ ಹೋರಾಟವಿದೆ. ಅವರ ಕುಟುಂಬವೇ ಈ ಹೋರಾಟದ ಹಾದಿಯಲ್ಲಿ ಸಾಗುತ್ತಾ ಬಂದಿದೆ ಎಂದಿದ್ದಾರೆ. ಮುಂದುವರಿದು ನಿಮ್ಮಂತೆ ಹೆದರಿ, ಕ್ಷಮಾಪಣಾ ಪತ್ರ ಬರೆಯುವವರಲ್ಲ ನಮ್ಮ ರಾಹುಲ್‌ ಗಾಂಧಿ. ರಾಹುಲ್‌ ಗಾಂಧಿಯವರು ಹುಟ್ಟು ಹೋರಾಟಗಾರರು. ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ನಡೆದ ಆ ಘಟನೆ ಕೇವಲ ಈ ದೇಶಕ್ಕೆ ಮಾತ್ರವಲ್ಲ, ಇಡೀ ಜಗತ್ತಿನ ಮಾನವೀಯತೆಗೆ ಸಂಬಂಧಪಟ್ಟ ವಿಚಾರ. ತಪ್ಪು ಮಾಡಿದ್ದರೆ ಅದನ್ನು ತಿದ್ದು ಕೊಳ್ಳಬೇಕು. ರಾಹುಲ್‌ ಗಾಂಧಿಯವರ ವಿರುದ್ಧ ರಾಜಕೀಯ ದ್ವೇಷದಿಂದ ಸುಳ್ಳು ಹಾಗೂ ದುರುದ್ದೇಶಪೂರಿತ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ, ನ್ಯಾಯಾಲಯವು ಈ ವಿಚಾರದಲ್ಲಿ ನಮಗೆ ನ್ಯಾಯ ಒದಗಿಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion