ನೆಪೋಟಿಸಂ ಪ್ರಶ್ನೆ ಕಾಂಗ್ರೆಸ್ಗೆ ಮಾತ್ರ ಏಕೆ? ಸಚಿವ ಪ್ರಿಯಾಂಕ್ ಖರ್ಗೆ
ರಾಜಕೀಯದಲ್ಲಿ ನೆಪೋಟಿಸಂ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿದ್ದಾರೆ. ನನ್ನ ರಾಜಕೀಯ ಭವಿಷ್ಯವನ್ನು ನಿರ್ಧರಿಸುವುದು ನನ್ನ ಕುಟುಂಬದ ಹೆಸರು ಅಲ್ಲ, ನನ್ನ ಕೆಲಸ ಮತ್ತು ಚಿತ್ತಾಪುರದ ಜನತೆ ಅಂತ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ. ನೆಪೋಟಿಸಂ ಎನ್ನುವುದು ಅವಕಾಶದ ಮೆಟ್ಟಿಲಾಗಬಹುದು. ಆದರೆ ನಮ್ಮ ಅಸ್ತಿತ್ವ ಉಳಿಸಿಕೊಳ್ಳುವುದು ಸ್ವಸಾಮರ್ಥ್ಯದಿಂದ ಮಾತ್ರ ಸಾಧ್ಯ. ಸಿನಿಮಾ ನಟರೇ ಆಗಿರಲಿ ಅಥವಾ ರಾಜಕಾರಣಿಗಳ ಮಕ್ಕಳೇ ಆಗಿರಲಿ, ಜನರ ವಿಶ್ವಾಸ ಗಳಿಸಲು ಸಾಧ್ಯವಾಗದೆ ಹೋದಲ್ಲಿ ಸೋಲು ಖಚಿತ. ಹಾಗೆ ನಾನು ನಾಲ್ಕು ಬಾರಿ ಚುನಾವಣೆಗೆ ನಿಂತು ಮೂರು ಬಾರಿ ಗೆದ್ದಿದ್ದೇನೆ. ಸಮಾಜಕಲ್ಯಾಣ ಇಲಾಖೆ ಸಚಿವನಾಗಿದ್ದೇನೆ, ಐಟಿಬಿಟಿ ಸಚಿವನಾಗಿದ್ದೇನೆ, ಈಗ ಗೃಹ ಸಚಿವನಾಗಿದ್ದೇನೆ. ಆದರೆ ಮೊದಲ ಬಾರಿ ಗೆದ್ದ ವಿಜಯೇಂದ್ರರವರು ಬಿಜೆಪಿ ರಾಜ್ಯಾಧ್ಯಕ್ಷರಾದರೆ ವಂಶರಾಜಕಾರಣ ಎನಿಸುವುದಿಲ್ಲ. ಆದರೆ ನಾನು ಸಚಿವನಾದರೆ ಕುಟುಂಬ ರಾಜಕಾರಣವೇ? ನೆಪೋಟಿಸಂ ಕುರಿತಾದ ಪ್ರಶ್ನೆಗಳು ಕಾಂಗ್ರೆಸ್ ಪಕ್ಷಕ್ಕೆ ಏಕೆ ಸೀಮಿತವಾಗಿರುತ್ತವೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ನನ್ನ ಭವಿಷ್ಯವನ್ನು ನಿರ್ಧರಿಸುವುದು ಇಬ್ಬರು ಮಾತ್ರ. ನನ್ನನ್ನು ಗೆಲ್ಲಿಸಬೇಕೋ, ಸೋಲಿಸಬೇಕೋ ಎಂಬುದನ್ನು ನನ್ನ ಕ್ಷೇತ್ರವಾದ ಚಿತ್ತಾಪುರದ ಜನತೆ ನಿರ್ಧರಿಸುತ್ತಾರೆ. ನನಗೆ ಯಾವ ಸ್ಥಾನಮಾನ ನೀಡಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ನನ್ನ ನಿಲುವು ಬಹಳ ಸರಳ. ಮೊದಲು ನನಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಉಳಿದಿದ್ದನ್ನು ಜನತೆ ಮತ್ತು ಹೈಕಮಾಂಡ್ ತೀರ್ಮಾನಿಸುತ್ತಾರೆ ಎಂದಿದ್ದಾರೆ.














Comments