• Sep 11, 2026
  • NPN Log
    ರಾಜ್ಯದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗೆ ಕಾಯುತ್ತಿದ್ದ ವಿದ್ಯಾರ್ಥಿಗಳ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು UGNEET-2026ರ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನ ಅಧಿಕೃತವಾಗಿ ಪ್ರಕಟಿಸಿದೆ. ಸೀಟು ಪಡೆದಿರುವ ಅಭ್ಯರ್ಥಿಗಳು ತಮ್ಮ ಮುಂದಿನ ಪ್ರವೇಶಾತಿ ಪ್ರಕ್ರಿಯೆಗಳನ್ನ ಪೂರ್ಣಗೊಳಿಸಲು ಪ್ರಾಧಿಕಾರವು ಸ್ಪಷ್ಟ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ಎಚ್ಚರಿಕೆಯಿಂದ ತಮ್ಮ ಆಯ್ಕೆಗಳನ್ನ ದಾಖಲಿಸುವಂತೆ ಸೂಚಿಸಲಾಗಿದೆ. ಫಲಿತಾಂಶದ ವಿವರ ರಾಜ್ಯದ ವಿವಿಧ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಇಚ್ಛಿಸಿ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳಿಗೆ ಮೊದಲ ಸುತ್ತಿನ ಅಂತಿಮ ಹಂಚಿಕೆ ಪಟ್ಟಿ ಬಿಡುಗಡೆಯಾಗಿದೆ. ಅಭ್ಯರ್ಥಿಗಳು ತಮ್ಮ ಲಾಗಿನ್ ವಿವರಗಳನ್ನ ಬಳಸಿ ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿ ತಮಗೆ ಯಾವ ಕಾಲೇಜಿನಲ್ಲಿ ಸೀಟು ಸಿಕ್ಕಿದೆ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು. ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳಿಗೆ ನಿಯಮಾನುಸಾರ ನಾಲ್ಕು ಚಾಯ್ಸ್ಗಳನ್ನ ನೀಡಲಾಗಿದೆ. Also Read ಎಂಜಿನಿಯರಿಂಗ್‌ಗೆ ನೇರ ಪ್ರವೇಶ: ಇಂದು ವೃತ್ತಿಪರ ಡಿಪ್ಲೊಮಾ ಅಭ್ಯರ್ಥಿಗಳ DCET ಸೀಟು ಹಂಚಿಕೆ ಫಲಿತಾಂಶ ಪ್ರಕಟ 4 ಆಯ್ಕೆಗಳು ಯಾವುವು? ವಿದ್ಯಾರ್ಥಿಗಳು ತಮಗೆ ಹಂಚಿಕೆಯಾಗಿರುವ ಸೀಟಿನ ಕುರಿತು ನಿರ್ಧಾರ ಕೈಗೊಳ್ಳಲು ಪ್ರಾಧಿಕಾರವು ನಾಲ್ಕು ಅವಕಾಶಗಳನ್ನ ನೀಡಿದ್ದು, ಅವುಗಳ ವಿವರ ಹೀಗಿದೆ: ಚಾಯ್ಸ್-1: ತಮಗೆ ಹಂಚಿಕೆಯಾಗಿರುವ ಸೀಟು ಮತ್ತು ಕಾಲೇಜು ಸಂಪೂರ್ಣ ತೃಪ್ತಿದಾಯಕವಾಗಿದೆ. ಇದೇ ಕಾಲೇಜಿಗೆ ಸೇರ್ಪಡೆಯಾಗುತ್ತೇನೆ. ಮುಂದಿನ ಯಾವುದೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ನಾನು ಭಾಗವಹಿಸುವುದಿಲ್ಲ ಎನ್ನುವ ಅಭ್ಯರ್ಥಿಗಳು ಈ ಆಯ್ಕೆಯನ್ನು ಮಾಡಬೇಕು. ಇವರು ನಿಗದಿತ ಶುಲ್ಕ ಪಾವತಿಸಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು. ಚಾಯ್ಸ್-2: ಸದ್ಯ ಸಿಕ್ಕಿರುವ ಸೀಟು ಇಷ್ಟವಾಗಿದೆ. ಆದರೆ, ಇದಕ್ಕಿಂತ ಉತ್ತಮವಾದ ಕಾಲೇಜು ಸಿಗುವ ನಿರೀಕ್ಷೆ ಇದೆ ಎನ್ನುವವರು ಈ ಆಯ್ಕೆ ಮಾಡಬಹುದು. ಇದರಿಂದ ಈಗಿರುವ ಸೀಟು ಕಾಯ್ದಿರಿಸಲ್ಪಡುತ್ತದೆ ಮತ್ತು ಮುಂದಿನ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ಚಾಯ್ಸ್-3: ಮೊದಲ ಸುತ್ತಿನಲ್ಲಿ ಸಿಕ್ಕಿರುವ ಸೀಟು ನನಗೆ ಬೇಡವೇ ಬೇಡ, ಆ ಸೀಟನ್ನು ನಾನು ಬಿಟ್ಟುಕೊಡುತ್ತೇನೆ. ಆದರೆ, ಮುಂದಿನ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ನಾನು ಪಾಲ್ಗೊಳ್ಳುತ್ತೇನೆ ಎನ್ನುವ ವಿದ್ಯಾರ್ಥಿಗಳು ಈ ಆಯ್ಕೆಯನ್ನು ಆರಿಸಿಕೊಳ್ಳಬೇಕು. ಚಾಯ್ಸ್-4 : ನನಗೆ ಈಗ ಸಿಕ್ಕಿರುವ ಸೀಟು ಬೇಡ ಹಾಗೂ ಮುಂದಿನ ಯಾವುದೇ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲೂ ನಾನು ಭಾಗವಹಿಸುವುದಿಲ್ಲ. ಕೌನ್ಸೆಲಿಂಗ್‌ನಿಂದ ಸಂಪೂರ್ಣವಾಗಿ ಹೊರಹೋಗುತ್ತೇನೆ ಎನ್ನುವವರು ಚಾಯ್ಸ್-4 ಅನ್ನು ಆಯ್ಕೆ ಮಾಡಿಕೊಳ್ಳಬಹುದು. Recommended For You VAO Recruitment 2026: ಮತ್ತೆ ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ, ಜಿಟಿಟಿಸಿ ಡಿಪ್ಲೊಮಾ ಅಭ್ಯರ್ಥಿಗಳಿಗೂ ಅವಕಾಶ ಪ್ರಮುಖ ದಿನಾಂಕಗಳು ಸೀಟು ಹಂಚಿಕೆಯಾಗಿರುವ ವಿದ್ಯಾರ್ಥಿಗಳು ನಿಗದಿತ ಸಮಯದೊಳಗೆ ಪ್ರಕ್ರಿಯೆ ಮುಗಿಸುವುದು ಕಡ್ಡಾಯವಾಗಿದೆ. 1. ಚಾಯ್ಸ್ ಆಯ್ಕೆಗೆ ಕೊನೆಯ ದಿನ: ಸೆಪ್ಟೆಂಬರ್ 2 2. ಶುಲ್ಕ ಪಾವತಿಗೆ ಕೊನೆಯ ದಿನ: ಸೆಪ್ಟೆಂಬರ್ 3 3. ಕಾಲೇಜಿನಲ್ಲಿ ಪ್ರವೇಶ ಪಡೆಯಲು ಕೊನೆಯ ದಿನ: ಸೆಪ್ಟೆಂಬರ್ 4 (ಚಾಯ್ಸ್-1 ಆಯ್ಕೆ ಮಾಡಿಕೊಂಡವರಿಗೆ ಮಾತ್ರ). ಈ ದಿನಾಂಕಗಳನ್ನು ಕಡೆಗಣಿಸಿದರೆ ಸೀಟು ರದ್ದಾಗುವ ಅಪಾಯವಿರುತ್ತದೆ. ಪೋಷಕರೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಿ ವೈದ್ಯಕೀಯ ಸೀಟು ಆಯ್ಕೆ ಮಾಡುವುದು ವಿದ್ಯಾರ್ಥಿಗಳ ಭವಿಷ್ಯದ ಬಹುದೊಡ್ಡ ನಿರ್ಧಾರವಾಗಿದೆ. "ಚಾಯ್ಸ್ ಆಯ್ಕೆ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು. ಯಾವುದೇ ಗಡಿಬಿಡಿ ಮಾಡದೆ, ಪೋಷಕರ ಜೊತೆ ಕೂತು ಚರ್ಚಿಸಿ, ಸಮಾಲೋಚನೆ ಮಾಡಿದ ನಂತರವೇ ಅಂತಿಮ ತೀರ್ಮಾನ ಕೈಗೊಳ್ಳಬೇಕು" ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ. ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಹಾಗೂ ಶುಲ್ಕ ಪಾವತಿಯ ವಿವರಗಳಿಗಾಗಿ ಕೆಇಎ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, ಮಾರ್ಗಸೂಚಿಯನ್ನು ಸಂಪೂರ್ಣವಾಗಿ ಓದಿಕೊಳ್ಳುವುದು ಸೂಕ್ತ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion