• Sep 11, 2026
  • NPN Log
    ಬೆಂಗಳೂರಿನ ಐಟಿ ಕಾರಿಡಾರ್‌ಗೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್‌ನಿಂದ ಎಲೆಕ್ಟ್ರಾನಿಕ್ ಸಿಟಿವರೆಗಿನ ಫ್ಲೈಓವರ್ ಟೋಲ್ ಸಂಗ್ರಹ ಒಪ್ಪಂದದ ಅವಧಿ ಇದೇ ಸೆಪ್ಟೆಂಬರ್ 10ರಂದು ಅಧಿಕೃತವಾಗಿ ಮುಕ್ತಾಯಗೊಳ್ಳಲಿದೆ. ಪ್ರತಿದಿನ ಲಕ್ಷಾಂತರ ವಾಹನಗಳು ಸಂಚರಿಸುವ 9.9 ಕಿಲೋಮೀಟರ್ ಉದ್ದದ ಈ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನ ನಿರ್ಮಾಣ, ನಿರ್ವಹಣೆ ಮತ್ತು ಹಸ್ತಾಂತರ (BOT) ಒಪ್ಪಂದದ ಗಡುವು ಹತ್ತಿರವಾಗುತ್ತಿದ್ದು, ಈ ಮಾರ್ಗದಲ್ಲಿ ದಿನನಿತ್ಯ ಸಂಚರಿಸುವ ವಾಹನ ಸವಾರರು ಟೋಲ್ ಮುಕ್ತ ಪ್ರಯಾಣದ ನಿರೀಕ್ಷೆಯಲ್ಲಿದ್ದಾರೆ. ಒಪ್ಪಂದ ಮುಗಿದ ಬಳಿಕ ಟೋಲ್ ಸಂಗ್ರಹವನ್ನ ಸಂಪೂರ್ಣವಾಗಿ ರದ್ದುಗೊಳಿಸಬೇಕೇ ಅಥವಾ ನಿರ್ವಹಣೆಗಾಗಿ ಮುಂದುವರಿಸಬೇಕೇ ಎಂಬ ಬಗ್ಗೆ ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿಗಳ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳು (NHAI) ಅಂತಿಮ ತೀರ್ಮಾನ ಕೈಗೊಳ್ಳಲಿವೆ. ಬೈಕ್ ಸವಾರರಿಗೆ ಸಿಗಲಿದೆಯಾ ರಿಲೀಫ್? ಸೆಪ್ಟೆಂಬರ್ 10ರ ನಂತರ ಫ್ಲೈಓವರ್ ಸಂಪೂರ್ಣವಾಗಿ ಸರ್ಕಾರದ ವಶಕ್ಕೆ ಬರಲಿದೆ. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಸಿಹಿಸುದ್ದಿ ಸಿಗುವ ಸಾಧ್ಯತೆ ಹೆಚ್ಚಿದೆ. ತುಮಕೂರು ರಸ್ತೆಯಲ್ಲಿರುವ ಡಾ. ಶಿವಕುಮಾರ ಸ್ವಾಮೀಜಿ ಫ್ಲೈಓವರ್‌ನಲ್ಲಿ ಬೈಕ್‌ಗಳಿಗೆ ಟೋಲ್ ವಿನಾಯಿತಿ ನೀಡಿರುವ ಮಾದರಿಯಲ್ಲೇ, ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲೂ ದ್ವಿಚಕ್ರ ವಾಹನಗಳಿಗೆ ಟೋಲ್ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡುವ ಸಾಧ್ಯತೆಯಿದೆ. Also Read ಬೆಂಗಳೂರು ಅಭಿವೃದ್ಧಿಗೆ ಕೃಷ್ಣ ಬೈರೇಗೌಡ ಖಡಕ್ ಸೂಚನೆ: ರಸ್ತೆ ಗುಂಡಿ, ಆಸ್ತಿ ತೆರಿಗೆ ಸೇರಿ ಹಲವು ಸಮಸ್ಯೆಗಳಿಗೆ ಪರಿಹಾರ ಆದರೆ, ಮೇಲ್ಸೇತುವೆಯ ನಿರ್ವಹಣಾ ವೆಚ್ಚ ಭರಿಸಲು ಕಾರು, ಬಸ್ ಸೇರಿದಂತೆ ದ್ವಿಚಕ್ರ ವಾಹನ ಹೊರತಾದ ಇತರೆ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಟೋಲ್ ಶುಲ್ಕ ಸಂಗ್ರಹ ಎಂದಿನಂತೆ ಮುಂದುವರಿಯುವ ಅಂದಾಜಿದೆ. 20 ವರ್ಷಗಳ ಒಪ್ಪಂದದ ಹಿನ್ನೆಲೆ ಐಟಿ ಉದ್ಯೋಗಿಗಳಿಗೆ ಟ್ರಾಫಿಕ್ ತಪ್ಪಿಸಲು 2006ರಲ್ಲಿ ಹೊಸೂರು ರಸ್ತೆಯ ಮೇಲ್ಸೇತುವೆ ಯೋಜನೆಗೆ ಚಾಲನೆ ನೀಡಲಾಗಿತ್ತು. ಅಂದು ಸುಮಾರು 990 ಕೋಟಿ ರೂಪಾಯಿ ವೆಚ್ಚದಲ್ಲಿ ಸೋಮ - ಎನ್‌ಸಿಸಿ - ಮೈತಾಸ್ ಕನ್‌ಸ್ಟ್ರಕ್ಷನ್ (Soma-NCC-Maytas) ಕಂಪನಿಗಳ ಜಂಟಿ ಸಹಭಾಗಿತ್ವದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. 2010ರಲ್ಲಿ ಈ ಫ್ಲೈಓವರ್ ಉದ್ಘಾಟನೆಗೊಂಡು ಸಾರ್ವಜನಿಕರಿಗೆ ಮುಕ್ತ ಸಂಚಾರಕ್ಕೆ ಮುಕ್ತವಾಗಿತ್ತು. ನಿರ್ಮಾಣ ಕಾರ್ಯದ ಅವಧಿ ಮತ್ತು ಕಾರ್ಯಾಚರಣೆ ಸೇರಿದಂತೆ ಒಟ್ಟು 20 ವರ್ಷಗಳ ಕಾಲ ಟೋಲ್ ಸಂಗ್ರಹಿಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದೀಗ ಆ 20 ವರ್ಷಗಳ ಗಡುವು ಸೆಪ್ಟೆಂಬರ್ 10ಕ್ಕೆ ಪೂರ್ಣಗೊಳ್ಳುತ್ತಿದೆ. ರಾಜ್ಯ ಸರ್ಕಾರಕ್ಕೆ ಹಸ್ತಾಂತರ ಚಿಂತನೆ ಸದ್ಯ ಈ ಮಾರ್ಗದಲ್ಲಿ ಎಲೆಕ್ಟ್ರಾನಿಕ್ ಸಿಟಿ ಮತ್ತು ಅತ್ತಿಬೆಲೆ ಬಳಿ ಎರಡೂ ಕಡೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಸೆಪ್ಟೆಂಬರ್ 10ಕ್ಕೆ ಒಪ್ಪಂದ ಮುಗಿದ ಬಳಿಕ ಈ ಫ್ಲೈಓವರ್ ಅನ್ನು 'ರಾಷ್ಟ್ರೀಯ ಹೆದ್ದಾರಿ' ಎಂಬ ಸ್ಥಾನಮಾನದಿಂದ ಕೈಬಿಟ್ಟು, ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸುವ ಕುರಿತು ಗಂಭೀರ ಚಿಂತನೆಗಳು ನಡೆಯುತ್ತಿವೆ. ಜೊತೆಗೆ, ಎರಡು ಕಡೆ ಇರುವ ಟೋಲ್ ಗೇಟ್‌ಗಳನ್ನು ತೆಗೆದು, ವಾಹನ ಸವಾರರ ಅನುಕೂಲಕ್ಕಾಗಿ ಕೇವಲ ಒಂದು ಕಡೆ ಮಾತ್ರ ಹೆದ್ದಾರಿ ಪ್ರಾಧಿಕಾರದ ಮೂಲಕ ಟೋಲ್ ಸಂಗ್ರಹಿಸುವ ಪ್ರಸ್ತಾವನೆ ಕೂಡ ಸರ್ಕಾರದ ಮುಂದಿದೆ. Recommended For You ಬೆಂಗಳೂರಲ್ಲಿ ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ, ವಿಸರ್ಜನೆಗೆ ಸಂಪೂರ್ಣ ನಿಷೇಧ: ಯಾವುದಕ್ಕೆಲ್ಲ ಜಿಬಿಎ ನಿರ್ಬಂಧ ಈ ಎಲ್ಲ ಬೆಳವಣಿಗೆಗಳ ನಡುವೆ, ಫ್ಲೈಓವರ್ ನಿರ್ವಹಣೆ ಮಾಡುತ್ತಿರುವ ಬಿಇಟಿಎಲ್ ಸಂಸ್ಥೆಯು ತಮಗೆ ಟೋಲ್ ಸಂಗ್ರಹ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ವಾಹನ ಸಂಚಾರವಿಲ್ಲದೆ ಭಾರೀ ಆದಾಯ ನಷ್ಟವಾಗಿದೆ, ಹೀಗಾಗಿ ಆ ನಷ್ಟವನ್ನು ಭರಿಸಿಕೊಳ್ಳಲು ಟೋಲ್ ಸಂಗ್ರಹ ಮುಂದುವರಿಸಲು ಅವಕಾಶ ನೀಡಬೇಕು ಎಂದು ಸಂಸ್ಥೆ ಕೇಳಿಕೊಂಡಿದೆ. ಈ ಕುರಿತು ಸರ್ಕಾರ ಹಾಗೂ ಪ್ರಾಧಿಕಾರ ಯಾವ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಕಾದು ನೋಡಬೇಕಿದೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion