ಹಾವೇರಿ ರೈತನ ಮಗಳಿಗೆ ₹46.33 ಲಕ್ಷ ಪ್ಯಾಕೇಜ್: ವೀಸಾದಲ್ಲಿ ಉದ್ಯೋಗ
ಸಾಧನೆ ಮಾಡಬೇಕು ಎಂಬ ಛಲವೊಂದಿದ್ದರೆ ಬಡತನ, ಮೂಲಸೌಕರ್ಯದ ಕೊರತೆ ಅಥವಾ ಹಳ್ಳಿಯಿಂದ ಬಂದವರೂ ಎನ್ನುವುದು ಯಾವುದೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಹಾವೇರಿ ಜಿಲ್ಲೆಯ ರೈತನ ಮಗಳೊಬ್ಬಳು ಉದಾಹರಣೆ. ಜಾಗತಿಕ ಮಟ್ಟದ ಖ್ಯಾತ ಪೇಮೆಂಟ್ ಟೆಕ್ನಾಲಜಿ ಕಂಪನಿಯಾದ ವೀಸಾದಲ್ಲಿ ಹಾವೇರಿಯ ಯುವತಿ ಬರೋಬ್ಬರಿ 46.33 ಲಕ್ಷ ರೂಪಾಯಿಗಳ ವಾರ್ಷಿಕ ಪ್ಯಾಕೇಜ್ನೊಂದಿಗೆ ಸಾಫ್ಟ್ವೇರ್ ಎಂಜಿನಿಯರ್ ಆಗಿ ಆಯ್ಕೆಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹಾವೇರಿ ಜಿಲ್ಲೆಯ ಹತ್ತಿಮತ್ತೂರು ಗ್ರಾಮದ ಸಾಮಾನ್ಯ ರೈತ ಕುಟುಂಬದ ಮಂಜುನಾಥ್ ಮತ್ತು ಸುಜಾತಾ ದಂಪತಿಯ ಪುತ್ರಿ ಸೃಷ್ಟಿ ಮಂಜುನಾಥ್ ಉಳ್ಳಾಗಡ್ಡಿ ಈ ಸಾಧನೆ ಮಾಡಿದ ಪ್ರತಿಭೆ. ಈಕೆ ಮೂಡುಬಿದಿರೆಯ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಅಂತಿಮ ವರ್ಷದ ಇನ್ಫಾರ್ಮೇಟಿವ್ ಸೈನ್ಸ್ ವಿಭಾಗದಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಳೆ. ಗ್ರಾಮೀಣ ಭಾಗದಿಂದ ಬಂದು ಅತ್ಯುತ್ತಮ ಶ್ರೇಣಿಯಲ್ಲಿ ಕಲಿಯುತ್ತಿರುವ ಸೃಷ್ಟಿ ಇದೀಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾಳೆ. Source: LinkedIn (Srushti Manjunath Ullagaddi) ಇಂಟರ್ನ್ಶಿಪ್ ಮೂಲಕ ವೀಸಾ ಕಂಪನಿಯಲ್ಲಿ ಉದ್ಯೋಗ ಸೃಷ್ಟಿ ತನ್ನ ಆರನೇ ಸೆಮಿಸ್ಟರ್ನಲ್ಲಿರುವಾಗಲೇ ವೀಸಾ ಕಂಪನಿಯಲ್ಲಿ 10 ವಾರಗಳ ಇಂಟರ್ನ್ಶಿಪ್ಗೆ ಆಯ್ಕೆಯಾಗಿದ್ದಳು. ಅತ್ಯಂತ ಕಠಿಣ ಹಾಗೂ ಸ್ಪರ್ಧಾತ್ಮಕ ಸಂದರ್ಶನ ಪ್ರಕ್ರಿಯೆಗಳನ್ನ ಯಶಸ್ವಿಯಾಗಿ ಎದುರಿಸಿ ಈ ಅವಕಾಶ ಗಿಟ್ಟಿಸಿಕೊಂಡಿದ್ದ ಸೃಷ್ಟಿಗೆ, ಇಂಟರ್ನ್ಶಿಪ್ ಅವಧಿಯಲ್ಲಿ ಕಂಪನಿಯು ಮಾಸಿಕ 90,000 ರೂ.ಗಳ ಸ್ಟೈಫಂಡ್ ಕೂಡ ನೀಡಿತ್ತು. Also Read ಕಾಲೇಜು ದಿನಗಳಲ್ಲೇ ಫ್ರೀಲ್ಯಾನ್ಸಿಂಗ್ ಮೂಲಕ 25ಲಕ್ಷ ರೂ. ಶೈಕ್ಷಣಿಕ ಸಾಲ ತೀರಿಸಿದ IIM ಪದವೀಧರೆ: ಯುವಜನತೆಗೆ ಮಾದರಿ ಈಕೆ ಇಂಟರ್ನ್ಶಿಪ್ ಸಮಯದಲ್ಲಿ ಆಕೆಯ ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ತಾಂತ್ರಿಕ ಜ್ಞಾನವನ್ನ ಮೆಚ್ಚಿದ ಕಂಪನಿಯು, ವ್ಯಾಸಂಗ ಪೂರ್ಣಗೊಳ್ಳುವ ಮುನ್ನವೇ ಸಾಫ್ಟ್ವೇರ್ ಎಂಜಿನಿಯರ್ ಆಗಿ ನೇಮಕಾತಿ ಮಾಡಿಕೊಂಡಿದೆ. ವೀಸಾ ಕಂಪನಿಯು ನೀಡಿರುವ ಆಫರ್ ಲೆಟರ್ ಪ್ರಕಾರ, ಸೃಷ್ಟಿಗೆ ವಾರ್ಷಿಕ 35.58 ಲಕ್ಷ ರೂ. ಮೂಲ ವೇತನ ಸಿಗಲಿದೆ. ಇದರ ಜೊತೆಗೆ 7.5 ಲಕ್ಷ ರೂ. ಮೌಲ್ಯದ ಕುಟುಂಬ ವೈದ್ಯಕೀಯ ವಿಮೆ, 25,000 ರೂ. ಒಪಿಡಿ ಪ್ರಯೋಜನ, 3 ಲಕ್ಷ ರೂ.ವರೆಗಿನ ಶಿಕ್ಷಣ ಸಬ್ಸಿಡಿ ಲಭ್ಯವಾಗಲಿದೆ. ಅಲ್ಲದೆ ಉಚಿತ ಜಿಮ್ ಪ್ರವೇಶ, ಕಚೇರಿ ಸಾರಿಗೆ ವ್ಯವಸ್ಥೆ ಹಾಗೂ ವಾರ್ಷಿಕ ಆರೋಗ್ಯ ತಪಾಸಣೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ. ಈ ಎಲ್ಲಾ ಸೌಲಭ್ಯಗಳು ಹಾಗೂ ವೇತನವನ್ನು ಸೇರಿಸಿದರೆ, ಆಕೆಯ ಒಟ್ಟು ವಾರ್ಷಿಕ ಪ್ಯಾಕೇಜ್ 46.33 ಲಕ್ಷ ರೂ.ಗಳಷ್ಟಾಗುತ್ತದೆ. ಇದು ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಇತಿಹಾಸದಲ್ಲಿಯೇ ವಿದ್ಯಾರ್ಥಿನಿಯೊಬ್ಬಳು ಪಡೆದ ಅತ್ಯಧಿಕ ಮೊತ್ತದ ಕ್ಯಾಂಪಸ್ ಉದ್ಯೋಗಾವಕಾಶವಾಗಿದೆ. ಗ್ರಾಮೀಣ ಪ್ರತಿಭೆಗೆ ಒಲಿದ ಜಾಗತಿಕ ಅವಕಾಶ ತನ್ನ ಈ ಯಶಸ್ಸಿನ ಬಗ್ಗೆ ಸಂತಸ ಹಂಚಿಕೊಂಡಿರುವ ಸೃಷ್ಟಿ, "ಆಳ್ವಾಸ್ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಹಾಗೂ ಉದ್ಯಮದ ವಾಸ್ತವಿಕ ಅನುಭವ ನೀಡಲು ಒತ್ತು ನೀಡುತ್ತದೆ. ವೀಸಾದಲ್ಲಿ ನನಗೆ ಸಿಕ್ಕ ಇಂಟರ್ನ್ಶಿಪ್ ಅವಕಾಶ ನನ್ನ ವೃತ್ತಿಜೀವನಕ್ಕೆ ಭದ್ರ ಬುನಾದಿ ಹಾಕಿತು ಮತ್ತು ನನ್ನ ಕನಸಿನ ಕೆಲಸವನ್ನ ಪಡೆಯಲು ಸಹಾಯ ಮಾಡಿತು" ಎಂದು ಕಾಲೇಜಿನ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದ್ದಾಳೆ. Recommended For You ಆಫೀಸ್ನಲ್ಲಿ ಸಿಗರೇಟ್ ಹೊಗೆಯ ಕಿರಿಕಿರಿ; ಕೆಲಸಕ್ಕೆ ಗುಡ್ಬೈ ಹೇಳಿದ ಬೆಂಗಳೂರು ಯುವತಿಯ ರೆಸಿಗ್ನೇಶನ್ ಲೇಟರ್ ವೈರಲ್ ವಿದ್ಯಾರ್ಥಿನಿಯ ಈ ಭಾರಿ ಸಾಧನೆಯನ್ನ ಶ್ಲಾಘಿಸಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ ಅವರು, "ಸರಿಯಾದ ಮಾರ್ಗದರ್ಶನ ಮತ್ತು ಉತ್ತಮ ಅವಕಾಶಗಳನ್ನ ಒದಗಿಸಿದರೆ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳು ಕೂಡ ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಉನ್ನತ ಮಟ್ಟದ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಸೃಷ್ಟಿಯ ಸಾಧನೆಯೇ ಸಾಕ್ಷಿ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಹಾವೇರಿಯ ಪುಟ್ಟ ಗ್ರಾಮದ ಪ್ರತಿಭೆಯೊಬ್ಬಳು ಇಂದು ಜಗತ್ತಿನ ಟಾಪ್ ಕಂಪನಿಯಲ್ಲಿ ಉನ್ನತ ಹುದ್ದೆಗೇರಿರುವುದು ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.














Comments